ದೇಶ

ಕೇರಳ ಸಿಎಂ ಪಿಣರಾಯಿ ಸಂಪುಟದ ಶೇ. 60ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣ: ಎಡಿಆರ್

Lingaraj Badiger

ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನೂತನ ಸಂಪುಟದಲ್ಲಿ ಹನ್ನೆರಡು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಅಫಿಡವಿಟ್‌ಗಳಲ್ಲಿ ಘೋಷಿಸಿಕೊಂಡಿರುವುದಾಗಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ತಿಳಿಸಿದೆ.

ಕೇರಳ ಚುನಾವಣಾ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮೇ 20ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಪಿಣರಾಯಿ ವಿಜಯನ್ ಸೇರಿದಂತೆ 21 ಸಚಿವರಲ್ಲಿ 20 ಮಂದಿಯ ಸ್ವ-ಪ್ರಮಾಣವಚನ ಅಫಿಡವಿಟ್ ಗಳನ್ನು ಪರಿಶೀಲಿಸಿದೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಮತ್ತು ಸರಿಯಾಗಿ ಸ್ಕ್ಯಾನ್ ಮಾಡಿದ ಅಫಿಡವಿಟ್ ಲಭ್ಯವಿಲ್ಲದ ಕಾರಣ ಸಿಪಿಐ (ಎಂ) ಮುಖಂಡ ಮತ್ತು ಸಚಿವ ವಿ.ಶಿವಂಕುಟ್ಟಿ ಅವರ ಅಫಿಡವಿಟ್ ಅನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ, ಶೇಕಡಾ 12 ಅಥವಾ ಶೇ. 60 ರಷ್ಟು ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದಾಗಿ ಘೋಷಿಸಿದರೆ, ಐದು ಅಥವಾ ಶೇ. 25 ರಷ್ಟು ಸಚಿವರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದಾರೆ.

ಪರಿಶೀಲಿಸಿದ 20 ಸಚಿವರ ಅಫಿಡವಿಟ್ ನಲ್ಲಿ 13 ಅಥವಾ ಶೇ. 65 ರಷ್ಟು ಸಚಿವರು 'ಕೋಟ್ಯಾಧಿಪತಿ'ಗಳಾಗಿದ್ದು, 20 ಸಚಿವರ ಸರಾಸರಿ ಆಸ್ತಿ 2.55 ಕೋಟಿ ರೂ. ಇದೆ ಎಂದು ಎಡಿಆರ್ ವರದಿ ವಿವರಿಸಿದೆ.

ತನೂರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ವಿ ಅಬ್ದುರಹಿಮನ್ ಅವರು ಒಟ್ಟು 17.17 ಕೋಟಿ ರೂ. ಆಸ್ತಿ ಘೋಷಿಸಿಕೊಳ್ಳುವ ಮೂಲಕ ಅತ್ಯಂತ ಶ್ರೀಮಂತ ಸಚಿವರಾಗಿದ್ದರೆ, 14.18 ಲಕ್ಷ ರೂ. ಮೌಲ್ಯದ ಆಸ್ತಿ ಘೋಷಿಸಿಕೊಂಡಿರುವ ಚೆರ್ತಲಾ ಕ್ಷೇತ್ರದ ಪಿ ಪ್ರಸಾದ್ ಅವರು ಅತ್ಯಂತ ಕಡಿಮೆ ಆಸ್ತಿ ಹೊಂದಿದ ಸಚಿವ ಎಂದು ವರದಿ ತಿಳಿಸಿದೆ.

SCROLL FOR NEXT