ದೇಶ

ಕೋವ್ಯಾಕ್ಸಿನ್ ತುರ್ತು ಬಳಕೆ ಪಟ್ಟಿಯಲ್ಲಿನ ಸ್ಥಾನಕ್ಕಾಗಿ ಡಬ್ಲ್ಯುಎಚ್‌ಒಗೆ ಶೇ.90 ರಷ್ಟು ದಾಖಲೆ ಸಲ್ಲಿಕೆ: ಭಾರತ್ ಬಯೋಟೆಕ್

Vishwanath S

ನವದೆಹಲಿ: ಕೋವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆ ಪಟ್ಟಿ(ಇಯುಎಲ್)ಯಲ್ಲಿ ಸ್ಥಾನ ಪಡೆಯುವ ಸಂಬಂಧ ಈಗಾಗಲೇ ಶೇ .90ರಷ್ಟು ದಾಖಲೆಗಳನ್ನು ಡಬ್ಲ್ಯುಎಚ್‌ಒಗೆ ಸಲ್ಲಿಸಲಾಗಿದೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಸರ್ಕಾರಕ್ಕೆ ತಿಳಿಸಿದೆ.

ಉಳಿದ ದಾಖಲೆಗಳನ್ನು ಜೂನ್ ವೇಳೆಗೆ ಸಲ್ಲಿಸುವ ನಿರೀಕ್ಷೆಯಿದೆ. ಕೋವ್ಯಾಕ್ಸಿನ್‌ ತುರ್ತು ಬಳಕೆ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿಯನ್ನು ಪಡೆಯುವ ಕುರಿತ ಚರ್ಚೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಲಿಮಿಟೆಡ್ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

"ಡಬ್ಲ್ಯುಬಿಒನ ತುರ್ತು ಬಳಕೆಯ ಪಟ್ಟಿಯನ್ನು ಸ್ಥಾನ ಪಡೆಯುವ ಬಗ್ಗೆ ಬಿಬಿಐಎಲ್ ವಿಶ್ವಾಸ ಹೊಂದಿದೆ" ಎಂದು ಮೂಲವೊಂದು ತಿಳಿಸಿದೆ.

ಕೋವ್ಯಾಕ್ಸಿನ್‌ ಈಗಾಗಲೇ 11 ದೇಶಗಳಿಂದ ನಿಯಂತ್ರಕ ಅನುಮೋದನೆ ಪಡೆದಿದೆ. ಅಲ್ಲದೆ ಏಳು ರಾಷ್ಟ್ರಗಳ 11 ಕಂಪನಿಗಳು ತಂತ್ರಜ್ಞಾನ ವರ್ಗಾವಣೆ ಮತ್ತು ಕೋವ್ಯಾಕ್ಸಿನ್‌ ಉತ್ಪಾದನೆಗೆ ಆಸಕ್ತಿ ತೋರಿಸಿವೆ ಎಂದು ಮೂಲಗಳು ತಿಳಿಸಿವೆ. 

ಅಮೆರಿಕಾದಲ್ಲಿ ಕೋವ್ಯಾಕ್ಸಿನ್ ಸಣ್ಣ ಪ್ರಮಾಣದ 3ನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಅಮೆರಿಕಾದ ಆಹಾರ ಮತ್ತು ಔಷಧ ಆಡಳಿತದೊಂದಿಗಿನ ಮಾತುಕತೆ ಅಂತಿಮ ಹಂತದಲ್ಲಿದೆ. ಇನ್ನು ಬ್ರೆಜಿಲ್ ಮತ್ತು ಹಂಗೇರಿಯಲ್ಲಿ ಕೋವ್ಯಾಕ್ಸಿನ್‌ ಗೆ ನಿಯಂತ್ರಕ ಅನುಮೋದನೆಗಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಅಂತಿಮ ಹಂತದಲ್ಲಿ ಬಿಬಿಐಎಲ್ ಇದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT