ದೇಶ

ಗುಜರಾತ್: 15 ಆರೋಪಿಗಳಿಗೆ ಜೀವಾವಧಿ, 44 ಮಂದಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

Nagaraja AB

ನಾಡಿಯಾಡ್: ಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ಬಿಲೋದ್ರಾ ಹಳ್ಳಿಯಲ್ಲಿ 2016ರಲ್ಲಿ ನಡೆದಿದ್ದ ಮಹಿಳೆಯೊಬ್ಬರ ಹತ್ಯೆ ಪ್ರಕರಣದಲ್ಲಿ 15 ಆರೋಪಿಗಳಿಗೆ ಜೀವಾವಧಿ ಹಾಗೂ ಇತರ 44 ಮಂದಿಗೆ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ನಾಡಿಯಾಡ್ ನ ಸೆಷನ್ಸ್ ನ್ಯಾಯಾಲಯವೊಂದು ಮಂಗಳವಾರ ತೀರ್ಪು ನೀಡಿದೆ. ಮಹಿಳೆಯ ಹತ್ಯೆ ಪ್ರಕರಣ ಎರಡು ಸಮುದಾಯಗಳ ಸದಸ್ಯರ ನಡುವೆ ಹಿಂಸಾಚಾರಕ್ಕೆ ಕಾರಣವಾಗಿತ್ತು.

ಆಗಸ್ಟ್ 28, 2016 ರಂದು ಮಹಿಳೆ ಕೆಸರ್ ಬೆನ್ ಸೋದಾ ಹತ್ಯೆ ಹಾಗೂ ತದನಂತರ ಸಂಭವಿಸಿದ ಎರಡು ಸಮುದಾಯಗಳ ನಡುವಿನ ಘರ್ಷಣೆಯಿಂದಾಗಿ 14 ಮಂದಿ ಗಾಯಗೊಂಡಿದ್ದ ಪ್ರಕರಣದಲ್ಲಿ ಆರೋಪಿ ಮಫತ್‌ಭಾಯ್ ಭಾರವಾಡ್ ಸೇರಿದಂತೆ 15 ಮಂದಿಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ನಾಡಿಯಡ್ ಸೆಷನ್ಸ್ ನ್ಯಾಯಾಧೀಶ ಡಿಆರ್ ಭಟ್ ಇಂದು ತೀರ್ಪು ಪ್ರಕಟಿಸಿದರು.

ಇನ್ನೊಂದು ಗುಂಪಿನ 44 ಸದಸ್ಯರಿಗೆ ಐಪಿಸಿ ಸೆಕ್ಷನ್ 436 ( ಮನೆಗೆ ಬೆಂಕಿ ಮತ್ತಿತರ ಕೃತ್ಯಗಳಿಂದ ಅನುಚಿತ  ವರ್ತನೆ ) 326 (ಸ್ವಯಂಪ್ರೇರಣೆಯಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಮತ್ತು 395 (ಕಳ್ಳತನ)  ಅಡಿಯಲ್ಲಿ 10 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಅನುಮಾನಾಸ್ಪದ ಆಧಾರದ ಮೇಲೆ ನಿರ್ದೂಷಿ ಎಂದು ಘೋಷಿಸಲಾಗಿದೆ. 

ಸೋದಾ ಹತ್ಯೆ ಪ್ರಕರಣದ ನಂತರ ನಾಡಿಯಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕ್ರಾಸ್ ಎಫ್ ಐಆರ್ ದಾಖಲಿಸಲಾಗಿತ್ತು. ಹತ್ಯೆ ಆರೋಪದ ಮೇರೆಗೆ ಸಮುದಾಯವೊಂದರ 15 ಜನರನ್ನು ಬಂಧಿಸಲಾಗಿತ್ತು, ಕಳ್ಳತನ, ಮನೆಗೆ ಬೆಂಕಿ ಮತ್ತಿತರ ಕಾರಣದಿಂದ ಇತರ ಸಮುದಾಯದ 45 ಮಂದಿಯನ್ನು ಬಂಧಿಸಲಾಗಿತ್ತು. ಹತ್ಯೆಗೆ ಸಂಬಂಧಿಸಿದಂತೆ 70 ಡಾಕ್ಯುಮೆಂಟರಿ ಸಾಕ್ಷ್ಯಗಳು, 49 ಸಾಕ್ಷಿದಾರರ ಹೇಳಿಕೆ ಆಧಾರದ ಮೇಲೆ ನ್ಯಾಯಾಲಯ ಈ ತೀರ್ಪು ಪ್ರಕಟಿಸಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಒಬ್ಬರು ತಿಳಿಸಿದ್ದಾರೆ. 

SCROLL FOR NEXT