ದೇಶ

'1947ರ ಸ್ವಾತಂತ್ರ್ಯ ಭಿಕ್ಷೆ' ಎಂದ ಕಂಗನಾರ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು: ಶಿವಸೇನೆ ಆಗ್ರಹ

Lingaraj Badiger

ಮುಂಬೈ: 1947ರಲ್ಲಿ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ. ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಅವರ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಎಂದು ಶಿವಸೇನೆ ಶನಿವಾರ ಒತ್ತಾಯಿಸಿದೆ ಮತ್ತು ಇದು "ದೇಶದ್ರೋಹ" ಎಂದು ಹೇಳಿದೆ.

ರಕ್ತ, ಬೆವರು, ಕಣ್ಣೀರು ಮತ್ತು ಅಸಂಖ್ಯಾತ ಭಾರತೀಯರ ತ್ಯಾಗದ ಮೂಲಕ ಸಾಧಿಸಿದ ಸ್ವಾತಂತ್ರ್ಯಕ್ಕೆ ಇಂತಹ ಅವಮಾನವನ್ನು ದೇಶ ಎಂದಿಗೂ ಸಹಿಸುವುದಿಲ್ಲ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಸಂಪಾದಕೀಯ ಹೇಳಿದೆ.

"ಮೋದಿ ಸರ್ಕಾರವು ಕಂಗನಾ ಅವರ ಎಲ್ಲಾ ರಾಷ್ಟ್ರೀಯ ಪ್ರಶಸ್ತಿಗಳನ್ನು ಹಿಂಪಡೆಯಬೇಕು" ಎಂದು ಸೇನೆ ಒತ್ತಾಯಿಸಿದೆ.

ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ಕಂಗನಾ ರನೌತ್ ಅವರ ಹೇಳಿಕೆಗಳು ಕೇಸರಿ ಪಕ್ಷದ "ನಕಲಿ ರಾಷ್ಟ್ರೀಯತೆಯನ್ನು" ಬಹಿರಂಗಪಡಿಸಿದೆ ಎಂದಿದೆ.

"ಕಂಗನಾಗೂ ಮುನ್ನ ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಯಾರೂ ಈ ರೀತಿ ಅವಮಾನಿಸಿರಲಿಲ್ಲ. ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಕಂಗನಾ ಅವರಿಗೆ ನೀಡಿ ಗೌರವಿಸಿರುವುದು ದುರದೃಷ್ಟಕರ" ಎಂದು ಸಾಮ್ನಾ ಸಂಪಾದಕೀಯ ಟೀಕಿಸಿದೆ.

ಈ ಹಿಂದೆ ಟೈಮ್ಸ್ ನೌ ಸಮಿಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಂಗನಾ ರನೌತ್ ಅವರು, ಸ್ವಾತಂತ್ರ್ಯದ ಕುರಿತು ಮಾತನಾಡಿದ್ದರು. '1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ನಮಗೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು 2014 ರಲ್ಲಿ ಎಂದಿದ್ದರು. ಕಂಗನಾ ಅವರ ಈ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೆಲವು ಬಿಜೆಪಿ ನಾಯಕರು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SCROLL FOR NEXT