ದೇಶ

2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳು ಶೇ.400 ರಷ್ಟು ಹೆಚ್ಚಳ

Lingaraj Badiger

ನವದೆಹಲಿ: 2019ಕ್ಕೆ ಹೋಲಿಸಿದರೆ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್ ಅಪರಾಧ ಪ್ರಕರಣಗಳಲ್ಲಿ ಶೇ. 400ರಷ್ಟು ಹೆಚ್ಚಳವಾಗಿದೆ. ಇದರಲ್ಲಿ ಹೆಚ್ಚಿನದಾಗಿ ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು, ಅಶ್ಲೀಲವಾಗಿ ಚಿತ್ರಿಸಿ ಪ್ರಕಟಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆಯ ದಳ(ಎನ್​ಸಿಆರ್​ಬಿ)ದ ಡೇಟಾದಿಂದ ತಿಳಿದುಬಂದಿದೆ.

ಉತ್ತರ ಪ್ರದೇಶ(170), ಕರ್ನಾಟಕ (144), ಮಹಾರಾಷ್ಟ್ರ (137), ಕೇರಳ (107) ಮತ್ತು ಒಡಿಶಾ (71) ಈ ಐದು ರಾಜ್ಯಗಳಲ್ಲಿ ಮಕ್ಕಳ ವಿರುದ್ಧದ ಸೈಬರ್​ ಅಪರಾಧಗಳು ಹೆಚ್ಚಾಗಿ ದಾಖಲಾಗಿವೆ ಎಂದು ಎನ್​ಸಿಆರ್​ಬಿ ವರದಿ ಹೇಳಿದೆ.

ಒಟ್ಟು 842 ಆನ್‌ಲೈನ್ ಅಪರಾಧ ಪ್ರಕರಣಗಳಲ್ಲಿ, 738 ಪ್ರಕರಣಗಳು ಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡು ಅಶ್ಲೀಲವಾಗಿ ಚಿತ್ರಿಸಿ ಪ್ರಕಟಿಸುವ ಅಥವಾ ರವಾನಿಸುವ ಪ್ರಕರಣಗಳಾಗಿವೆ.

2019ರಲ್ಲಿ 164 ಪ್ರಕರಣಗಳು ದಾಖಲಾಗಿದ್ದವು. 2018ರಲ್ಲಿ 117 ಮತ್ತು 2017ರಲ್ಲಿ 79 ಪ್ರಕರಣಗಳು ದಾಖಲಾಗಿದ್ದವು.

‘ಕೋವಿಡ್ ಪಿಡುಗನ್ನು ತಡೆಯಲು ಹೇರಿದ ಕ್ರಮಗಳಿಂದ ಶಾಲೆಗಳು ಮುಚ್ಚಿದವು. ಇದರಿಂದ ಮಕ್ಕಳು ಓದಿನಿಂದ ವಿಮುಖರಾಗಿ ಅಂತರ್ಜಾಲದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಿತು. ಮಕ್ಕಳ ಮೇಲೆ ಸೈಬರ್‌ ಅಪರಾಧ ಹೆಚ್ಚಲು ಇದು ಕಾರಣವಿರಬಹುದು ಎಂದು ಮಕ್ಕಳ ಹಕ್ಕುಗಳು ಮತ್ತು ನೀವು ಸಂಸ್ಥೆಯಾದ ‘ಕ್ರೈ’ನ ಸಿಇಒ ಪೂಜಾ ಮಾರ್ವಾಹಾ ಅವರು ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT