ದೇಶ

ಹಫ್ತಾ ವಸೂಲಿ ಪ್ರಕರಣ: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ 'ಘೋಷಿತ ಅಪರಾಧಿ'

Lingaraj Badiger

ಮುಂಬೈ: ಹಫ್ತಾ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು 'ಘೋಷಿತ ಅಪರಾಧಿ' ಎಂದು ಮುಂಬೈ ಕೋರ್ಟ್ ಬುಧವಾರ ಘೋಷಿಸಿದೆ.

ತಲೆಮರೆಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ವಿರುದ್ಧ ಈಗಾಗಲೇ ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದ್ದ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಇದೀಗ ಪೊಲೀಸ್ ಅಧಿಕಾರಿ ಘೋಷಿತ ಅಪರಾಧಿ ಎಂದು ಘೋಷಿಸಿದೆ. ಇದರಿಂದ ವಿವಾದಿತ ಮಾಜಿ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಪರಮ್ ಬೀರ್ ಸಿಂಗ್ ಅವರ ವಿರುದ್ಧ ದಾಖಲಾಗಿರುವ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 30 ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ನಿರಾಕರಿಸಿದರೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ಸಿಂಗ್ ಅವರನ್ನು "ಪರಾರಿ"ಯಾಗಿರುವ ಆರೋಪಿ ಎಂದು ಘೋಷಿಸುವಂತೆ ಕೋರಿ ರಾಜ್ಯದ ಅಪರಾಧ ತನಿಖಾ ಇಲಾಖೆ(ಸಿಐಡಿ) ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ಸ್ವೀಕರಿಸಿದೆ. ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿದ್ದರೂ ಸಿಂಗ್ ಪತ್ತೆಯಾಗದ ಕಾರಣ ಸಿಐಡಿ ಈ ಕ್ರಮ ಕೈಗೊಂಡಿದೆ ಮತ್ತು ಈ ಕ್ರಮವು ಆತನನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗೆ ಸಹಾಯ ಮಾಡುತ್ತದೆ.

ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರು 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು ಎಂದು ಪರಮ್ ಬೀರ್ ಸಿಂಗ್ ಗಂಭೀರ ಆರೋಪ ಮಾಡಿದ್ದರು. ಅಲ್ಲದೆ ಈ ಸಂಬಂಧ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲೂ ಈ ಪತ್ರ ತೀವ್ರ ಸಂಚಲನ ಮೂಡಿಸಿತ್ತು.

ಈ ಸಂಬಂಧ ಜುಲೈ 23 ರಂದು ಪರಮ್ ಬೀರ್ ಸಿಂಗ್, ಸಚಿನ್ ವಾಜೆ ಮತ್ತು ಇತರರ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

SCROLL FOR NEXT