ದೇಶ

ಆಂಧ್ರ ಪ್ರದೇಶ ಪ್ರವಾಹ: ಸಾವಿನ ಸಂಖ್ಯೆ 25ಕ್ಕೇರಿಕೆ, ರೈಲು, ರಸ್ತೆ ಸಂಪರ್ಕ ಕಡಿತ, ನೂರಾರು ಮಂದಿ ನಾಪತ್ತೆ

Srinivasamurthy VN

ಅಮರಾವತಿ: ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದ್ದು, ಇನ್ನೂ ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕಾರಣ ಪೆನ್ನಾ ನದಿ ಉಕ್ಕಿ ಹರಿದ ಪರಿಣಾಮ ದಕ್ಷಿಣ ಮತ್ತು ಪೂರ್ವಕ್ಕೆ ಸಂಪರ್ಕ ಕಲ್ಪಿಸುವ ಆಂಧ್ರಪ್ರದೇಶದ ಮುಖ್ಯ ರೈಲು ಮತ್ತು ರಸ್ತೆ ಮಾರ್ಗಗಳು ಕಡಿತಗೊಂಡಿವೆ.  ಚೆನ್ನೈ-ಕೋಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-16 ಅನ್ನು ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ಪಡುಗುಪಾಡುವಿನಲ್ಲಿ ಭಾರಿ ಪ್ರಮಾಣದ ನೀರು ಹರಿದ ಪರಿಣಾಮ ರಸ್ತೆ ಸಂಚಾರ ಸ್ಥಗಿತವಾಗಿದೆ.

ರೈಲುಗಳ ಸಂಚಾರ ಅಸ್ತವ್ಯಸ್ಥ
ದಕ್ಷಿಣ ಮಧ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಗಜಾನನ ಮಲ್ಯ ಅವರು ನೀಡಿರುವ ಮಾಹಿತಿಯಂತೆ, ಪಡುಗುಪಾಡು ರೈಲ್ವೆ ಹಳಿಯ ಮೇಲೆ ಪ್ರವಾಹ ಉಕ್ಕಿ ಹರಿಯುತ್ತಿದ್ದು ಚೆನ್ನೈ-ವಿಜಯವಾಡ ಗ್ರ್ಯಾಂಡ್ ಟ್ರಂಕ್ ಮಾರ್ಗದಲ್ಲಿ ಕನಿಷ್ಠ 17 ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇತರ ಮೂರು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಅಥವಾ ಬೇರೆಡೆಗೆ ತಿರುಗಿಸಲಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ನಂದಲೂರು-ರಾಜಂಪೇಟೆ ವಿಭಾಗದಲ್ಲಿ ಚೆಯ್ಯೆರು ಪ್ರವಾಹದ ಪರಿಣಾಮ ರೈಲ್ವೆ ಹಳಿ ಕೊಚ್ಚಿ ಹೋಗಿದ್ದು, ಪರಿಶೀಲನೆ ನಡೆಸಿದರು. ಟ್ರ್ಯಾಕ್ ಮರುಸ್ಥಾಪನೆ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ಎಸ್‌ಸಿಆರ್ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲಾ ಗುಣಮಟ್ಟದ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ ಮರುಸ್ಥಾಪನೆ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಪ್ರಧಾನ ವ್ಯವಸ್ಥಾಪಕರು ಅಧಿಕಾರಿಗಳಿಗೆ ಸೂಚಿಸಿದರು. ಏತನ್ಮಧ್ಯೆ, ವಿಜಯವಾಡ ವಿಭಾಗದ ನೆಲ್ಲೂರು-ಪಡುಗುಪಾಡು ವಿಭಾಗದಲ್ಲಿ ರೈಲು ಹಳಿಯಲ್ಲಿ ನೀರು ತುಂಬಿರುವ ಕಾರಣ ಶನಿವಾರ ಮತ್ತು ಭಾನುವಾರ ಕನಿಷ್ಠ 10 ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.

ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ಸೋಮಶಿಲಾ ಜಲಾಶಯದಿಂದ ಎರಡು ಲಕ್ಷ ಕ್ಯೂಸೆಕ್ ಗೂ ಹೆಚ್ಚು ಪ್ರವಾಹದ ನೀರು ಹೊರಕ್ಕೆ ಹರಿದು ಬಂದಿದ್ದು, ಪ್ರವಾಹಕ್ಕೆ ಕಾರಣವಾಯಿತು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಇದರಿಂದ ಕೋವೂರು ರಾಷ್ಟ್ರೀಯ ಹೆದ್ದಾರಿ-16ರಲ್ಲಿಯೂ ಬಿರುಕು ಉಂಟಾಗಿದೆ. ಇದರ ಪರಿಣಾಮವಾಗಿ, ನೆಲ್ಲೂರು ಮತ್ತು ವಿಜಯವಾಡ ನಡುವೆ NH-16 ನಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ, ಇದರಿಂದಾಗಿ ನೂರಾರು ವಾಹನಗಳು ಎರಡೂ ಬದಿಗಳಲ್ಲಿ ಕಿಲೋಮೀಟರ್ ಗಟ್ಟಲೆ ನಿಂತಿವೆ.  ನೆಲ್ಲೂರು ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ಪವಿತ್ರ ಕ್ಷೇತ್ರ ಶ್ರೀಕಾಳಹಸ್ತಿಯಿಂದ ಬರುವ ವಾಹನಗಳ ಸಂಚಾರವನ್ನು ತೊಟ್ಟೆಂಬೆಡು ಚೆಕ್‌ಪೋಸ್ಟ್‌ನಲ್ಲಿ ನಿಲ್ಲಿಸಿ ಪಾಮೂರು ಮತ್ತು ದರ್ಸಿ ಮಾರ್ಗವಾಗಿ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

64 ಜನರ ರಕ್ಷಣೆ
ಭಾರತೀಯ ವಾಯುಪಡೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಅನಂತಪುರ, ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದಾಗಿ ಅಪಾಯಕ್ಕೆ ಸಿಲುಕಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ಕನಿಷ್ಠ 64 ಜನರನ್ನು ರಕ್ಷಿಸಿದ್ದಾರೆ.

ಸಿಎಂ ವೈಮಾನಿಕ ಸಮೀಕ್ಷೆ
ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಪ್ರವಾಹ ಪೀಡಿತ ಕಡಪ, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕಡಪ ಮತ್ತು ಚಿತ್ತೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ ಅವರು, ಹಾನಿಯ ಬಗ್ಗೆ ವಿವರಗಳನ್ನು ಪಡೆದುಕೊಂಡರು. ಪ್ರವಾಹದ ನೀರು ಇಳಿಮುಖವಾದ ತಕ್ಷಣ ಬೆಳೆ ನಷ್ಟದ ಲೆಕ್ಕಾಚಾರವನ್ನು ಮಾಡಲು ಅಧಿಕಾರಿಗಳಿಗೆ ಸಿಎಂ ಜಗನ್ ಸೂಚಿಸಿದ್ದಾರೆ. ಅಂತೆಯೇ ಪ್ರವಾಹದಲ್ಲಿ ಮೃತರಾದವರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.

ತಿರುಪತಿಯಲ್ಲಿ ಪ್ರವಾಹ ಮುಂದುವರಿಕೆ
ಇನ್ನು ಪ್ರವಾಹ ಪೀಡಿತ ತಿರುಪತಿಯಲ್ಲಿ ಈಗಲೂ ಪ್ರವಾಹ ಮುಂದುವರೆದಿದ್ದು, ರಸ್ತೆಗಳು, ಜನವಾಸಿ ಅನೇಕ ಪ್ರದೇಶಗಳು ಈಗಲೂ ಜಲಾವೃತಗೊಂಡಿವೆ. ಪವಿತ್ರ ತಿರುಮಲ ಬೆಟ್ಟಗಳಲ್ಲಿನ ನದಿಗಳ ನೀರಿನ ಹರಿವಿನ ಪ್ರಮಾಣ ತಗ್ಗಿದ್ದು, ಆದರೂ ಸುರಿಯುವ ಮಳೆಯು ಯಾತ್ರಾರ್ಥಿಗಳಿಗೆ ಅನಾನುಕೂಲತೆಯನ್ನುಂಟುಮಾಡುತ್ತಿದೆ. ತಿರುಮಲ ತಿರುಪತಿ ದೇವಸ್ಥಾನಗಳು ವಾಹನ ಸಂಚಾರಕ್ಕಾಗಿ ಘಾಟ್ ರಸ್ತೆಗಳನ್ನು ಮತ್ತೆ ತೆರೆದಿವೆ. ಆದರೆ ಅಲಿಪಿರಿ ಕಾಲುದಾರಿ ಮಾರ್ಗದಲ್ಲಿ ಪ್ರವಾಹದಿಂದಾಗಿ ಅವಶೇಷಗಳು ತುಂಬಿದ್ದು, ಅದನ್ನು ತೆರವುಗೊಳಿಸುವ ವರೆಗೂ ಕಾಲುದಾರಿ ಮಾರ್ಗ ಯಾತ್ರಿಕರಿಗೆ ಮುಕ್ತವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆಯಿಂದಾಗಿ ಹಲವರ ಸಾವು
ಇನ್ನು ಮಳೆ ಸಂಬಂಧಿತ ದುರ್ಘಟನೆಗಳಲ್ಲಿ ಹಲವರ ಸಾವು ಸಂಭವಿಸಿದ್ದು, ಅನಂತಪುರ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದು ಕುಸಿದು ಪಕ್ಕದ ಕಟ್ಟಡದ ಮೇಲೆ ಬಿದ್ದಿದ್ದು, ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ. ಪೊಲೀಸರು ಮತ್ತು ಕಂದಾಯ ಅಧಿಕಾರಿಗಳು ಅಪಘಾತದ ಸ್ಥಳದಿಂದ ಇನ್ನೂ ಏಳು ಜನರನ್ನು ರಕ್ಷಿಸಿದ್ದಾರೆ. ಚಿತ್ತೂರು ಜಿಲ್ಲೆಯಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯಲ್ಲಿ, ವಿಜಯನಗರದಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪಡೆಗೆ ನಿಯೋಜಿಸಲಾದ ಕಾನ್‌ಸ್ಟೆಬಲ್ ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯ ದಾಮರಮಡುಗು ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಒಟ್ಟಾರೆ ಆಂಧ್ರ ಪ್ರದೇಶದಲ್ಲಿ ಈ ವರೆಗೂ ಪ್ರವಾಹದಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ನೂರಾರು ಮನೆಗಳಿಗೆ ಹಾನಿ, ಜಾನುವಾರುಗಳ ಸಾವು
ಆಂಧ್ರ ಪ್ರದೇಶ ಪ್ರವಾಹದಿಂದಾಗಿ 5 ಕೋಟಿ ಮೌಲ್ಯದ 1,549 ಮನೆಗಳು ಹಾನಿಗೀಡಾಗಿದ್ದು, ಇನ್ನೂ 488 ಮನೆಗಳು ಮುಳುಗಡೆಯಾಗಿವೆ. 612 ಜಾನುವಾರುಗಳು ಸಾವನ್ನಪ್ಪಿದ್ದು, 3,232 ಕೋಳಿಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಒಟ್ಟು 2.31 ಕೋಟಿ ರೂ ಮೌಲ್ಯದ ಸುಮಾರು 1,791 ಕುರಿ ಮತ್ತು ಮೇಕೆಗಳಂತಹ ಸಣ್ಣ ಜಾನುವಾರುಗಳು ಸಹ ಪ್ರವಾಹದಲ್ಲಿ ಸಾವನ್ನಪ್ಪಿವೆ. ಸರ್ಕಾರದ ಅಂಕಿಅಂಶಗಳ ಪ್ರಕಾರ 2.33 ಲಕ್ಷ ಹೆಕ್ಟೇರ್‌ಗಳಲ್ಲಿ ಕೃಷಿ ಬೆಳೆಗಳು ಮತ್ತು ಸುಮಾರು 20,000 ಹೆಕ್ಟೇರ್‌ಗಳಲ್ಲಿನ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಹಠಾತ್ ಪ್ರವಾಹದಿಂದಾಗಿ ಅನೇಕ ಮೋರಿಗಳು, ಕಾಸ್‌ವೇಗಳು ಮತ್ತು ಸೇತುವೆಗಳು ವ್ಯಾಪಕ ಹಾನಿಯನ್ನು ಅನುಭವಿಸಿವೆ. 

ಪರಿಹಾರ ಶಿಬಿರಗಳು ಕಾರ್ಯಾರಂಭ
ಇನ್ನು  ಸೋಮಸಿಲಾ ನದಿಯ ಪ್ರವಾಹದಲ್ಲಿ ಸಿಲುಕಿರುವ ಗ್ರಾಮಸ್ಥರನ್ನು ರಕ್ಷಿಸಲು ಎಸ್‌ಡಿಆರ್‌ಎಫ್ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸೋಮಸಿಲದಲ್ಲಿ 3.32 ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ಪ್ರವಾಹವನ್ನು ಶನಿವಾರ ಹೊರಬಿಡುವುದರಿಂದ ಎಸ್‌ಪಿಎಸ್ ನೆಲ್ಲೂರು ಜಿಲ್ಲೆಯು ಹಲವು ಗ್ರಾಮಗಳಲ್ಲಿ ಪ್ರವಾಹ ಸಂಭವಿಸಿದೆ. ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 243 ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಂದ 20,923 ಜನರನ್ನು ಸ್ಥಳಾಂತರಿಸಲಾಗಿದೆ.

SCROLL FOR NEXT