ದೇಶ

2 ವರ್ಷಗಳಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

Srinivasamurthy VN

ನವದೆಹಲಿ: ಮುಂದಿನ 2 ವರ್ಷಗಳಲ್ಲಿ ಅಂದರೆ 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ದೇಶದಲ್ಲಿ ಇನ್ನೂ 5G ಸೇವೆಯೇ ಇನ್ನೂ ಆರಂಭಗೊಂಡಿಲ್ಲ. ಅದಾಗಲೇ ಕೇಂದ್ರ ಸರ್ಕಾರ 6ಜಿ ಸೇವೆಯನ್ನು ಆರಂಭಿಸಲು ಚಿಂತನೆಯಲ್ಲಿ ತೊಡಗಿದೆ. ಇದಕ್ಕೆ ಇಂಬು ನೀಡುವಂತೆ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದು, 2023ರ ಅಂತ್ಯ ಅಥವಾ 2024ರ ಆರಂಭದಲ್ಲಿ ದೇಶದಲ್ಲಿ 6ಜಿ ಸೇವೆ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ಅವರು, '2023ರ ಅಂತ್ಯದ ವೇಳೆಗೆ ಇಲ್ಲವೇ 2024ರ ಆರಂಭದಲ್ಲಿ ಅಂದರೆ 2 ವರ್ಷದೊಳಗೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ. ಈ ಯಶಸ್ವಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳಿಗೆ ಮತ್ತು ಎಂಜಿನಿಯರ್ ಗಳಿಗೆ ಅಗತ್ಯ ಅನುಮತಿ ನೀಡಲಾಗಿದೆ. ದೇಶದಲ್ಲಿ 6G ಸೇವೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ದಾಪುಗಾಲು ಇಡುತ್ತಿದ್ದೇವೆ. ಭಾರತದಲ್ಲಿ ನಾವು ಟೆಲಿಕಾಂ ಸಾಫ್ಟವೇರ್ ಅನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಈ ನೂತನ ಸಾಫ್ಟವೇರ್, ಭಾರತದಲ್ಲಿ ತಯಾರಿಸಿದ ಟೆಲಿಕಾಂ ಸಾಧನಗಳು ಹಾಗೂ ಟೆಲಿಕಾಂ ನೆಟ್ ವರ್ಕ್ ಗಳಿಗೆ ಸೇವೆ ಒದಗಿಸಲಿದೆ. ಅಲ್ಲದೆ ಮುಂದಿನ ವರ್ಷದ 3ನೇ ತ್ರೈಮಾಸಿಕ ವೇಳೆಗೆ ತಂತ್ರಜ್ಞಾನದ ಪ್ರಮುಖ ಸಾಫ್ಟವೇರ್ ಅನ್ನು ಸಿದ್ಧಪಡಿಸಲಿದ್ದೇವೆ ಎಂದು ಹೇಳಿದರು. 

ಅಂತೆಯೇ 5G ಕುರಿತು ಮಾತನಾಡಿದ ಕೇಂದ್ರ ಸಚಿವರು, 2022ರ 2ನೇ ತ್ರೈಮಾಸಿಕದಲ್ಲಿ ಐದನೇ ತಲೆಮಾರಿನ ತರಂಗಾಂತರಗಳನ್ನು ಹರಾಜು ಮಾಡುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು. 

ಮೂಲಗಳ ಪ್ರಕಾರ, 'ಭಾರ್ತಿ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವೊಡಾಫೋನ್-ಐಡಿಯಾಗಳಿಗೆ ದೇಶದಲ್ಲಿ 5G ಪ್ರಯೋಗಗಳಿಗಾಗಿ ಸ್ಪೆಕ್ಟ್ರಮ್ ನೀಡಲಾಗಿದೆ. ಈ ಸಮಯದಲ್ಲಿ ಜಿಯೋ ಮತ್ತು ಏರ್ ಟೆಲ್ ಸುಮಾರು 1ಜಿಬಿ/ಸೆಕೆಂಡ್ ಗರಿಷ್ಠ 5G ವೇಗವನ್ನು ದಾಖಲಿಸಿದೆ. ಮತ್ತೊಂದೆಡೆ, 5G ಪ್ರಯೋಗದ ಸಮಯದಲ್ಲಿ ವೋಡಾಫೋನ್-ಐಡಿಯಾ ಗರಿಷ್ಠ 3.5ಜಿಬಿ/ಸೆಕೆಂಡ್ ವೇಗವನ್ನು ಸಾಧಿಸಿದೆ.

SCROLL FOR NEXT