ದೇಶ

ಸಮೀರ್ ವಾಂಖೆಡೆ ವಿರುದ್ಧ ಟ್ವೀಟ್, ಸಾರ್ವಜನಿಕ ಹೇಳಿಕೆ ನೀಡುವುದಿಲ್ಲ: ಬಾಂಬೆ ಹೈಕೋರ್ಟ್ ಗೆ ನವಾಬ್ ಮಲಿಕ್

Lingaraj Badiger

ಮುಂಬೈ: ಮುಂದಿನ ಡಿಸೆಂಬರ್ 9ರ ವಿಚಾರಣೆವರೆಗೆ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರ ವಿರುದ್ಧ ಮತ್ತು ಅವರ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದಿಲ್ಲ ಹಾಗೂ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಮಹಾರಾಷ್ಟ್ರ ಸಚಿವ, ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಸಮೀರ್ ವಾಂಖೆಡೆ ಅವರ ಜಾತಿ ಪ್ರಮಾಣೀಕರಣದ ವಿರುದ್ಧದ ಆರೋಪಗಳ ಬಗ್ಗೆ ಜಾತಿ ಪರಿಶೀಲನಾ ಸಮಿತಿಗೆ ದೂರು ನೀಡಿದ್ದೀರಾ ಎಂದು ಮಹಾ ಸಚಿವರನ್ನು ಪ್ರಶ್ಮಿಸಿದ ಹೈಕೋರ್ಟ್, ದೂರು ನೀಡದಿದ್ದರೆ "ಮಾಧ್ಯಮ ಪ್ರಚಾರ"ದ ಹಿಂದಿನ ನಿಮ್ಮ ಉದ್ದೇಶವೇನು? ಇದು ಸಚಿವರಿಗೆ ಯೋಗ್ಯವಲ್ಲ ಎಂದು ಹೇಳಿದೆ.

ಮುಂದಿನ ವಿಚಾರಣೆಯವರೆಗೆ ವಾಂಖೆಡೆ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡದಂತೆ ಸಚಿವರನ್ನು ನಿರ್ಬಂಧಿಸುವ ಆದೇಶ ಹೊರಡಿಸುವ ಬಗ್ಗೆ ಹೈಕೋರ್ಟ್ ಒಲವು ತೋರಿದ ನಂತರ ಮಲಿಕ್ ಅವರ ಪರವಾಗಿ ಅವರ ವಕೀಲ ಕಾರ್ಲ್ ತಾಂಬೋಲಿ ಅವರು ವಾಂಖೆಡೆ ಅವರ ವಿರುದ್ಧ ಮತ್ತು ಅವರ ಕುಟುಂಬದ ಯಾವುದೇ ಸದಸ್ಯರ ವಿರುದ್ಧ ಯಾವುದೇ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದಿಲ್ಲ ಹಾಗೂ ಯಾವುದೇ ಸಾರ್ವಜನಿಕ ಹೇಳಿಕೆಗಳನ್ನು ನೀಡುವುದಿಲ್ಲ  ಎಂದು ನ್ಯಾಯಮೂರ್ತಿಗಳಾದ ಎಸ್ ಜೆ ಕಥವಲ್ಲಾ ಮತ್ತು ಮಿಲಿಂದ್ ಜಾಧವ್ ಅವರ ಪೀಠಕ್ಕೆ ತಿಳಿಸಿದರು.

ನವಾಬ್ ಮಲಿಕ್ ಅವರ ಟ್ವೀಟ್‌ಗಳು ದುರುದ್ದೇಶದಿಂದ ಹುಟ್ಟಿಕೊಂಡಿವೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೀಠ ಹೇಳಿದೆ.

"ಸಚಿವರು ಯಾಕೆ ಈ ರೀತಿ ವರ್ತಿಸುತ್ತಿದ್ದಾರೆ? ಅವರು ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಬಯಸುತ್ತೇವೆ? ಇದು ದುರುದ್ದೇಶವಲ್ಲದೆ ಬೇರೇನೂ ಅಲ್ಲ. ದಯವಿಟ್ಟು ದುರುದ್ದೇಶದ ನಿಘಂಟು ಅರ್ಥವನ್ನು ಓದಿ" ಎಂದು ಹೈಕೋರ್ಟ್ ಹೇಳಿದೆ.

SCROLL FOR NEXT