ದೇಶ

ಸದ್ಯದಲ್ಲಿಯೇ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ: ಕೆಲವರು ಹೈಕಮಾಂಡ್ ಗೆ ಬಹುಪರಾಕ್, ಇನ್ನು ಕೆಲವರು ಕಪಿಲ್ ಸಿಬಲ್ ಗೆ ಬೆಂಬಲ

Sumana Upadhyaya

ನವದೆಹಲಿ: ನಾಯಕತ್ವ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರ ತೀವ್ರ ಟೀಕೆ ನಂತರ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೆವಾಲಾ, ಸದ್ಯದಲ್ಲಿಯೇ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

ಕಳೆದ ವಾರ ಶಿಮ್ಲಾಕ್ಕೆ ತೆರಳುವ ಮುನ್ನ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಬಗ್ಗೆ ಸೂಚನೆ ನೀಡಿದ್ದು ಪಕ್ಷದ ಉನ್ನತ ಮುಖಂಡರು ಸದ್ಯದಲ್ಲಿಯೇ ಸಭೆ ಕರೆಯಲಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾತ್ಮಕ ಪುನಶ್ಚೇತನವಾಗಬೇಕು ಎಂದು ಸಲಹೆ ನೀಡಿ ಪಕ್ಷದ ನಾಯಕತ್ವ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಜಿ-23ಯ ಪ್ರಮುಖ ನಾಯಕರಾದ ಕಪಿಲ್ ಸಿಬಲ್ ಮತ್ತು ಗುಲಾಂ ನಬಿ ಆಜಾದ್ ಅವರು ತಕ್ಷಣವೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಕರೆದು ಪಂಜಾಬ್ ಮತ್ತು ಬೇರೆ ರಾಜ್ಯಗಳ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಕಾಂಗ್ರೆಸ್ ಈ ಮಧ್ಯೆ ಎರಡು ಬಣಗಳಾಗಿವೆ ಎಂದು ಹೇಳಲಾಗುತ್ತಿದೆ. ಒಂದು ಗುಂಪು ಹೈಕಮಾಂಡ್ ನ್ನು ಬಲವಾಗಿ ಸಮರ್ಥಿಸುತ್ತಿದ್ದು, ಕಪಿಲ್ ಸಿಬಲ್ ಅವರನ್ನು ಸಂಘಟಿತ ಗೂಂಡಾಗಿರಿ ಎಂದು ಜರೆಯುತ್ತಿದೆ, ಕಪಿಲ್ ಸಿಬಲ್ ಅವರು ಜಿ-23 ಜಿ ಹುಜೂರ್ 23ಯಲ್ಲ ಎಂದು ಹೇಳಿದ್ದರು.

ಗುಲಾಂ ನಬಿ ಆಜಾದ್ ಮತ್ತು ಇತರ ಹಿರಿಯ ನಾಯಕರಾದ ಪಿ ಚಿದಂಬರಂ, ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ, ಶಶಿ ತರೂರ್, ವಿವೇಕ್ ತಂಖಾ ಮತ್ತು ರಾಜ್ ಬಬ್ಬರ್, ಅವರಲ್ಲಿ ಕೆಲವರು ಜಿ 23ಯ ಭಾಗವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಸಿಬಲ್ ಅವರ ಮನೆಯ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದ್ದು ಇದು ಕಾಂಗ್ರೆಸ್ ಸಂಸ್ಕೃತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ಇತರ ಕೆಲವು ನಾಯಕರುಗಳಾದ ಭೂಪೇಶ್ ಬಘೇಲ್, ಪವನ್ ಖೇರಾ, ಅಶ್ವಿನಿ ಕುಮಾರ್ ಮತ್ತು ತಾರಿಕ್ ಅನ್ವರ್ ಸಿಬಲ್ ಅವರನ್ನು ಟೀಕಿಸಿದ್ದಾರೆ. ಪಕ್ಷದ ನಾಯಕರು ಶಿಸ್ತಿನ ದೃಷ್ಟಿಯಿಂದ ಆಂತರಿಕ ವಿಷಯಗಳನ್ನು ಸಾರ್ವಜನಿಕ ವೇದಿಕೆಗಳಿಗೆ ತೆಗೆದುಕೊಂಡು ಹೋಗಬಾರದು. ಇದು ತಳಮಟ್ಟದ ಕಾರ್ಯಕರ್ತರನ್ನು ನೋಯಿಸುತ್ತದೆ ಎಂದು ಈ ನಾಯಕರು ಹೇಳಿದ್ದಾರೆ.

SCROLL FOR NEXT