ದೇಶ

ಪ್ರತಿಭಟನಾ ನಿರತ ರೈತರು - ಯುಪಿ ಸರ್ಕಾರದ ನಡುವೆ ಮಾತುಕತೆ ಯಶಸ್ವಿ: ಮೃತರ ಕುಟುಂಬಕ್ಕೆ 45 ಲಕ್ಷ ರೂ. ಪರಿಹಾರ

Lingaraj Badiger

ಲಖನೌ: ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಪ್ರಾಣ ಕಳೆದುಕೊಂಡ ನಂತರ ಪ್ರತಿಭಟನೆ ನಡೆಸುತ್ತಿದ್ದ ರೈತರೊಂದಿಗೆ ಉತ್ತರ ಪ್ರದೇಶ ಸರ್ಕಾರ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ತಮ್ಮ ಹೋರಾಟವನ್ನು ಕೈಬಿಡುವುದಾಗಿ ರೈತರು ಘೋಷಿಸಿದ್ದಾರೆ.

ಹೆಚ್ಚುವರಿ ಮಹಾನಿರ್ದೇಶಕ(ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಪ್ರಕಾರ, ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ಕು ರೈತರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 45 ಲಕ್ಷ ರೂ. ಪರಿಹಾರ ಹಾಗೂ ಮೃತರ ಅವಲಂಬಿತರಿಗೆ ಸರ್ಕಾರಿ ಉದ್ಯೋಗ ಮತ್ತು ಹಿಂಸಾಚಾರದಲ್ಲಿ ಗಾಯಗೊಂಡವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡುವ ಭರವಸೆ ನೀಡಲಾಗಿದೆ.

ಹಿಂಸಾಚಾರದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಮತ್ತು ಮುಂದಿನ ಎಂಟು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪ್ರಶಾಂತ್ ಕುಮಾರ್ ಹೇಳಿದ್ದಾರೆ.


ಪ್ರತಿಭಟನಾ ನಿರತ ರೈತರು ಮತ್ತು ಉತ್ತರ ಪ್ರದೇಶ ಸರ್ಕಾರದ ನಡುವಿನ ಮಾತುಕತೆ ಯಶಸ್ವಿಯಾದ ನಂತರವೇ ಪ್ರತಿಭಟನಾಕಾರರು ಭಾನುವಾರ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರು ರೈತರ ಮರಣೋತ್ತರ ಪರೀಕ್ಷೆಗೆ ಒಪ್ಪಿಕೊಂಡರು. ಶವಪರೀಕ್ಷೆಯನ್ನು ಐದು ವೈದ್ಯರ ಸಮಿತಿಯಿಂದ ಮಾಡಲಾಗುವುದು ಮತ್ತು ಪ್ರಕ್ರಿಯೆಯನ್ನು ವೀಡಿಯೋ ಮಾಡಲಾಗುತ್ತದೆ.

ಲಖಿಂಪುರ್ ಖೇರಿಯಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಭುಗಿಲೆದ್ದ ಪರಿಣಾಮ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಸೇರಿ 8 ಮಂದಿ ಮೃತಪಟ್ಟಿದ್ದಾರೆ.

SCROLL FOR NEXT