ದೇಶ

ಇದೇ ಮೊದಲು: ನೀಲ್ಗಿರಿಸ್ ನಲ್ಲಿ ಆನೆ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಅಂತ್ಯಸಂಸ್ಕಾರ!

Srinivas Rao BV

ಕೊಯಂಬತ್ತೂರು: ಕೆಸರಿನೊಳಗೆ ಸಿಲುಕಿ ಸಾವನ್ನಪ್ಪಿದ್ದ 4 ವರ್ಷಗಳ ಗಂಡಾನೆಯ ಅಂತ್ಯಸಂಸ್ಕಾರಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನೀಲ್ಗಿರೀಸ್ ನ ಮಳವನ್ ಚೆರಂಪಾಡಿಯಲ್ಲಿ ಆನೆ ದೇಹವನ್ನು ಛಿದ್ರಗೊಳಿಸಿ ದೂರಕ್ಕೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಹಲವು ಭಾಗಗಳನ್ನಾಗಿ ತುಂಡರಿಸಲಾಗಿದ್ದ ಆನೆಯ ಕಳೇಬರವನ್ನು ಸ್ಥಳೀಯ ಪ್ರದೇಶಗಳಲ್ಲಿ ಹೂಳಲಾಗಿದೆ.

ಆನೆಯ ಮೃತ ದೇಹವನ್ನು ಹಲವು ಭಾಗಗಳನ್ನಾಗಿ ತುಂಡರಿಸಿ ಮಣ್ಣಿನಲ್ಲಿ ಹೂಳಲಾದ ಘಟನೆ ಇದೇ ಮೊದಲು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅ.2 ರಂದು ನೀಲ್ಗಿರೀಸ್ ನ ಪಂಡಲೂರ್ ನಲ್ಲಿ ಆನೆ ಮರಿ ಕೆಸರಲ್ಲಿ ಸಿಲುಕಿ ಸಾವನ್ನಪ್ಪಿತ್ತು. ಮೃತ ಆನೆಯ ಬಳಿ ಹೆಣ್ಣಾನೆಗಳ ಹಿಂಡು ಹಾಗೂ 2 ಹಿರಿಯ ಆನೆಗಳು ಕಣ್ಣೀರು ಸುರಿಸಿದ್ದವು. ಶನಿವಾರದಂದು ಆನೆಗಳ ಹಿಂಡು ವಾಪಸ್ ತೆರಳಿದ ಬಳಿಕವಷ್ಟೇ ಅರಣ್ಯ ಇಲಾಖೆ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ಚೆರಂಪಾಡಿ ಜಿ ರಾಮಕೃಷ್ಣನ್ "ಸ್ಥಳೀಯರು ಆನೆ ಮೃತಪಟ್ಟ ಪ್ರದೇಶದಲ್ಲಿ ಅಂತ್ಯಸಂಸ್ಕಾರ ನಡೆಸಲು ವಿರೋಧ ವ್ಯಕ್ತಪಡಿಸಿದ  ಹಿನ್ನೆಲೆಯಲ್ಲಿ ಮೃತದೇಹವನ್ನು ಛಿದ್ರಗೊಳಿಸಿ ಬೇರೆಡೆಗೆ ಕೊಂಡೊಯ್ದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಆನೆ ಮೃತಪಟ್ಟ ಪ್ರದೇಶದ 300 ಮೀಟರ್ ವ್ಯಾಪ್ತಿಯಲ್ಲಿ ಪಂಚಾಯತ್ ಇರುವುದರಿಂದ ಈ ಪ್ರದೇಶ ಮಲಿನವಾಗಬಹುದು ಎಂಬ ಕಾರಣಕ್ಕೆ ಆನೆಯನ್ನು ಈ ಭಾಗದಲ್ಲಿ ಹೂಳುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. 

ಮರಿ ಆನೆಯ ಕಳೇಬರ 1.5 ಟನ್ ಗಳಷ್ಟು ತೂಕವಿತ್ತು. ಕನಿಷ್ಟ 15 ತುಂಡುಗಳನ್ನಾಗಿಸಿ 1 ಕಿ.ಮೀ ದೂರಕ್ಕೆ ಕೊಂಡೊಯ್ದು ಹೂಳಲಾಗಿದೆ ಎಂದು ರಾಮಕೃಷ್ಣನ್ ಹೇಳಿದ್ದಾರೆ. 
 

SCROLL FOR NEXT