ದೇಶ

ಲಖಿಂಪುರ್ ಖೇರಿಯತ್ತ ರಾಹುಲ್ ಗಾಂಧಿ, ಸೀತಾಪುರ ಅತಿಥಿಗೃಹ ತಲುಪಿದ ಕಾಂಗ್ರೆಸ್ ನಾಯಕ

Lingaraj Badiger

ಲಖನೌ: ಭಾರೀ ಹೈಡ್ರಾಮದ ನಂತರ ಲಖನೌ ವಿಮಾನ ನಿಲ್ದಾಣದಿಂದ ಲಖಿಂಪುರ ಖೇರಿಗೆ ತೆರಳುತ್ತಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೀತಾಪುರದ ಪಿಎಸಿ ಅತಿಥಿ ಗೃಹವನ್ನು ತಲುಪಿದ್ದಾರೆ. ಖೇರಿಗೆ ಹೋಗುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಇಲ್ಲಿಯೇ ಬಂಧಿಸಲಾಗಿತ್ತು.

ಉತ್ತರ ಪ್ರದೇಶ ಸರ್ಕಾರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಸೇರಿದಂತೆ ಐವರಿಗೆ ಲಖಿಂಪುರ ಖೇರಿಗೆ ತೆರಳಲು ಅನುಮತಿ ನೀಡಿದ ರಾಹುಲ್ ಗಾಂಧಿ ಅವರು ಲಖನೌ ವಿಮಾನ ನಿಲ್ದಾಣದಿಂದ ಲಖಿಂಪುರ ಖೇರಿಗೆ ತಮ್ಮ ಕಾರಿನಲ್ಲಿ ತೆರಳಲು ಮುಂದಾದರು. ಆದರೆ ಇದಕ್ಕೆ ಅನುಮತಿ ನೀಡದ ಪೊಲೀಸರು ಪೊಲೀಸ್ ಕಾರಿನಲ್ಲಿ ಪ್ರಯಾಣಿಸುವಂತೆ ಕೇಳಿಕೊಂಡರು. ಇದಕ್ಕೆ ಒಪ್ಪದ ರಾಹುಲ್ ಗಾಂಧಿ ವಿಮಾನ ನಿಲ್ದಾಣದಲ್ಲಿಯೇ  ಕೆಲಕಾಲ ಧರಣಿ ನಡೆಸಿದರು. ನಂತರ ರಾಹುಲ್ ಗಾಂಧಿ ತಮ್ಮ ಸ್ವಂತ ವಾಹನದಲ್ಲಿ ಲಖಿಂಪುರ್ ಖೇರಿಗೆ ತೆರಳಿದರು.

ರಾಹುಲ್ ಗಾಂಧಿ ಅವರು ಇಂದು ಮಧ್ಯಾಹ್ನ ದೆಹಲಿಯಿಂದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಹಾಗೂ ರಣದೀಪ್ ಸುರ್ಜೇವಾಲಾ ಅವರೊಂದಿಗೆ ಲಖನೌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

"ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಮತ್ತು ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರೊಂದಿಗೆ ರಾಹುಲ್ ಗಾಂಧಿ ಲಖನೌ ವಿಮಾನ ನಿಲ್ದಾಣದಿಂದ ಲಖಿಂಪುರ್ ಖೇರಿಗೆ ತೆರಳಿದ್ದಾರೆ" ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಅವರು ಪಿಟಿಐಗೆ ತಿಳಿಸಿದ್ದಾರೆ.

ಕಳೆದ ಭಾನುವಾರ ರಾತ್ರಿ ಕೇಂದ್ರ ಸಚಿವ ಅಜಯ್​ ಮಿಶ್ರಾ ಅವರ ತಂದೆಯ ಊರು ಲಖೀಂಪುರ ಖೇರಿಯ ಟಿಕೂನಿಯಾ ಎಂಬಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಮುಖ್ಯ ಅತಿಥಿಯಾಗಿ ಆಗಮಿಸಬೇಕಿತ್ತು. ಆದರೆ ಕೃಷಿ ಕಾಯ್ದೆ ವಿರೋಧಿಸಿ ರೈತರು ಒಟ್ಟುಗೂಡಿ ಪ್ರತಿಭಟನೆ ನಡೆಸುವ ಮೂಲಕ ಕಾರನ್ನು ತಡೆದಿದ್ದರು. ಈ ವೇಳೆ ಎರಡು ಕಾರು ಅವರ ಮೇಲೆ ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ಈ ಘಟನೆಯಿಂದ ಹಿಂಸಾಚಾರ ನಡೆದಿದ್ದು, ಇಲ್ಲಿಯವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ.

SCROLL FOR NEXT