ದೇಶ

ಎಪ್ರಿಲ್ 2022 ರಿಂದ ಹಳೆಯ ವಾಹನಗಳ ನೋಂದಣಿ ನವೀಕರಣ ಶುಲ್ಕ 6 ಪಟ್ಟು ಹೆಚ್ಚಳ

Harshavardhan M

ನವದೆಹಲಿ: 15 ವರ್ಷಗಳಿಗೂ ಹಳೆಯ ವಾಹನಗಳ ನೋಂದಣಿ ನವೀಕರಣಕ್ಕೆ ವಾಹನ ಮಾಲೀಕರು ಎಪ್ರಿಲ್ 2022ರಿಂದ ದುಬಾರಿ ಬೆಲೆ ತೆರ ಬೇಕಾಗುವುದು. 

ಸದ್ಯ ಹಳೆಯ ಕಾರುಗಳ ನೋಂದಣಿ ನವೀಕರಣಕ್ಕೆ 600 ರೂ. ಶುಲ್ಕ ನಿಗದಿ ಪಡಿಸಲಾಗಿದೆ. ಮುಂದಿನ ವರ್ಷ ಎಪ್ರಿಲ್ ತಿಂಗಳಿನಿಂದ ವಾಹನ ಮಾಲೀಕರು 5,000 ರೂ. ತೆರಬೇಕಾಗಿ ಬರಲಿದೆ.

ಅದೇ ರೀತಿ ಸದ್ಯ 15 ವರ್ಷಗಳಿಗಿಂತ ಹಳೆಯ ದ್ವಿಚಕ್ರ ವಾಹನಗಳಿಗೆ 300 ರೂ. ನಿಗದಿ ಪಡಿಸಲಾಗಿದೆ, ಎಪ್ರಿಲ್ 2022ರ ನಂತರ 1,000 ರೂ. ಶುಲ್ಕ ತೆರಬೇಕಾಗುತ್ತದೆ. 

ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸೂಚನೆ ಹೊರಡಿಸಿದೆ. ಗುಜರಿ ವಾಹನ ನೀತಿ ಜಾರಿ ಸಲುವಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.  

15 ವರ್ಷಗಳಿಗೂ ಹಳೆಯ ಲಾರಿ ಬಸ್ಸುಗಳ ನೋಂದಣಿ ನವೀಕರಣಕ್ಕೆ ಈಗಿನ ದರಕ್ಕಿಂತ 8 ಪಟ್ಟು ಹೆಚ್ಚು ಶುಲ್ಕ ತೆರಬೇಕಾಗುವುದು. ಅದರಂತೆ ಲಾರಿ ಬಸ್ಸು ಮಾಲೀಕರು ಸದ್ಯ 1,500 ಶುಲ್ಕವನ್ನು ನೋಂದಣಿ ನವೀಕರಣಕ್ಕಾಗಿ ತೆರುತ್ತಿದ್ದಾರೆ. ಮುಂದೆ ಅವರು 12,500 ತೆರಲಿದ್ದಾರೆ.

ಆಮದು ಮಾಡಿಕೊಂಡ ಬೈಕು ಮತ್ತು ಕಾರುಗಳ ನೋಂದಣಿ ನವೀಕರಣ ಶುಲ್ಕ ಕ್ರಮವಾಗಿ 10,000 ರೂ. ಮತ್ತು 40,000 ಆಗಲಿದೆ. ನೋಂದಣಿ ನವೀಕರಣ ಗಡುವು ಮೀರಿದರೆ ದಿನಕ್ಕೆ 50 ರೂ. ದಂಡವನ್ನು ಮಾಲೀಕರು ಕಟ್ತಬೇಕಾಗುತ್ತದೆ ಎಂದು ಸೂಚನೆಯಲ್ಲಿ ಹೇಳಲಾಗಿದೆ.

SCROLL FOR NEXT