ದೇಶ

ಪರಿಹಾರ ಹಣದಿಂದ ನನ್ನ ಮಗ ವಾಪಸ್ ಬರುವನೇ?; ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು: ಲಖೀಂಪುರ ಸಂತ್ರಸ್ತನ ತಂದೆ

Shilpa D

ಭೂಪಾಲ್: ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜಿನಾಮೆ ನೀಡಲೇಬೇಕು, ಅವರ ಪುತ್ರನನ್ನು ತಕ್ಷಣವೇ ಬಂಧಿಸಬೇಕೆಂದು ಲಖೀಂಪುರ ಖೇರಿ ದುರ್ಘಟನೆಯಲ್ಲಿ ಮಡಿದ ಲವ್ ಪ್ರೀತ್ ಸಿಂಗ್ ತಂದೆ ಸತ್ನಾಮ್ ಸಿಂಗ್ ಒತ್ತಾಯಿಸಿದ್ದಾರೆ.

ಅಶಿಶ್ ಮಿಶ್ರಾ ಅವರಿಗೆ ಸೇರಿದೆ ಎಂದು ಹೇಳಲಾದ ವಾಹನಕ್ಕೆ ಬಲಿಯಾದವರಲ್ಲಿ 19 ವರ್ಷದ ಲವ್ ಪ್ರೀತ್ ಸಿಂಗ್ ಸೇರಿದ್ದರು. ಪರಿಹಾರದ ಹಣದಿಂದ ನನ್ನ ಮಗ ವಾಪಸ್ ಬರುವುದಿಲ್ಲ, ಆತನನ್ನು ಕೊಲೆ ಮಾಡಿದ ಎಲ್ಲರನ್ನು ಬಂಧಿಸಿದಾಗ ಮಾತ್ರ ನಮಗೆ ನ್ಯಾಯ ಸಿಗುತ್ತದೆ, ಸರ್ಕಾರದಿಂದ ಪರಿಹಾರ ಘೋಷಿಸಿದ ಮಾತ್ರಕ್ಕೆ ನನ್ನ ಮಗನ ಹಂತಕರನ್ನು ಮುಕ್ತವಾಗಿ ತಿರುಗಾಡಲು ಯಾರಾದರೂ ಅನುಮತಿಸಬಹುದೇ? ಎಂದು ಸತ್ನಾಮ್ ಸಿಂಗ್ ಪ್ರಶ್ನಿಸಿದ್ದಾರೆ.

ಸತ್ನಾಮ್ ಸಿಂಗ್ ಮತ್ತು ಸತ್ವಿಂದರ್ ಕೌರ್ ಅವರ ಮೂವರು ಮಕ್ಕಳಲ್ಲಿ ಲವ್ ಪ್ರೀತ್ ಸಿಂಗ್ ಹಿರಿಯರು.  ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ಕೆನಡಾಕ್ಕೆ ಹೋಗಲು ಅಂತಾರಾಷ್ಟ್ರೀಯ ಇಂಗ್ಲೀಷ್ ಭಾಷಾ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಆದರೆ ಅಕ್ಟೋಬರ್ 3 ರಂದು  ನಡೆದ ಘಟನೆ ಕುಟುಂಬದ ಕನಸುಗಳನ್ನು ಭಗ್ನಗೊಳಿಸಿತು ಎಂದು ಹಳ್ಳಿಯ ಪ್ರಧಾನ ಸುಖದೇವ್ ಸಿಂಗ್ ಹೇಳಿದರು.

ಅವರು ಸರಳ ಮತ್ತು ಸ್ನೇಹಪರ ಯುವಕನಾಗಿದ್ದ,  ಜೊತೆಗೆ ಎಲ್ಲರಿಗೂ ಸಹಾಯ ಮಾಡಲು ಸಿದ್ಧನಾಗಿದ್ದ. ಲವ್ ಪ್ರೀತ್  ಕೃಷಿ ಆಂದೋಲನದಲ್ಲಿ ಭಾಗವಹಿಸುತ್ತಿದ್ದರು. ಅಕ್ಟೋಬರ್ 3 ರಂದು, ಹಳ್ಳಿಯ ಇತರ ಕೆಲವು ಯುವಕರೊಂದಿಗೆ ಲವ್‌ಪ್ರೀತ್ ಟಿಕುನಿಯಾ ಪಟ್ಟಣದಲ್ಲಿ ಪ್ರತಿಭಟನೆಗೆ ಹೋದರು ಆದರೆ ಸಚಿವರ ಮಗನ ವಾಹನಕ್ಕೆ ಬಲಿಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಮೃತಯುವಕನ ಕುಟುಂಬಸ್ಥರನ್ನು ಭೇಟಿ ಮಾಡಿದ ನಂತರ ವೈದ್ಯರ ತಂಡ ಅವರ ಮನೆಗೆ ಆಗಮಿಸಿ ಲವ್ ಪ್ರೀತ್ ತಾಯಿಯ ಅವರ ಸಂಪೂರ್ಣ ಆರೋಗ್ಯ ತಪಾಸಣೆ ನಡೆಸಿತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿತು, ಆದರೆ ಆಕೆ ಆಸ್ಪತ್ರೆಗೆ ತೆರಳಲು ನಿರಾಕರಿಸಿದರು, ಸದ್ಯ ಅವರು ಆರೋಗ್ಯವಾಗಿದ್ದು ಮಹಿಳಾ ವೈದ್ಯರೊಬ್ಬರು ಅವರ ಮನೆಯಲ್ಲಿಯೇ ತಂಗಿದ್ದು, ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಗನ ಸಾವಿನ ನಂತರ ಗಂಭೀರ ಸ್ಥಿತಿಯಲ್ಲಿದ್ದ ಲವ್‌ಪ್ರೀತ್ ತಾಯಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸುಪ್ರೀಂ ಕೋರ್ಟ್ ಯುಪಿ ಸರ್ಕಾರಕ್ಕೆ ಸೂಚಿಸಿತ್ತು.

SCROLL FOR NEXT