ದೇಶ

ಕ್ರೂಸ್ ಶಿಪ್ ಡ್ರಗ್ಸ್: ಬಾಲಿವುಡ್ ಪ್ರಭಾವಿ ನಿರ್ಮಾಪಕರ ಮನೆ ಮೇಲೆ ಎನ್ ಸಿಬಿ ದಾಳಿ, ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ

Srinivasamurthy VN

ಮುಂಬೈ: ಕ್ರೂಸ್ ಶಿಪ್ ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೂ ಕೂಡ ಮುಂಬೈನಲ್ಲಿ ದಾಳಿ ಮುಂದುವರೆದಿದ್ದು, ಬಾಲಿವುಡ್ ನ ಪ್ರಭಾವಿ ನಿರ್ಮಾಪಕರೊಬ್ಬರ ಮನೆ ಮೇಲೆ ಎನ್ ಸಿಬಿ ದಾಳಿ ನಡೆಸಿದೆ.

ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿರುವ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಅವರ ನಿವಾಸದ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.  

ಅಲ್ಲದೆ ಎನ್ ಸಿಬಿ ಮೂಲಗಳ ಮುಂಬೈ ಮೂಲದ ಬಿಲ್ಡರ್ ಮಗನಾಗಿರುವ ಖಾತ್ರಿ ಕೂಡ ಈ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.  ಖಾತ್ರಿ ಬಾಲಿವುಡ್‌ನ ಅನೇಕ ದೊಡ್ಡ ತಾರೆಯರೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದು, ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾದಕ ದ್ರವ್ಯಗಳನ್ನು ಪೂರೈಸಿದ್ದಾರೆ ಎಂದು ಆರೋಪಿಸಲಾಗಿತ್ತು ಎನ್ನಲಾಗಿದೆ.

ಸಮನ್ಸ್ ಜಾರಿ
ಇದೇ ವೇಳೆ ಎನ್ ಸಿಬಿ ಅಧಿಕಾರಿಗಳು ನಿರ್ಮಾಪಕ ಇಮ್ತಿಯಾಜ್ ಖಾನ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಕೂಡ ಜಾರಿ ಮಾಡಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ನಿರ್ಮಾಪಕರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

ಶಾರುಖ್ ಖಾನ್ ಪುತ್ರ, ಇತರ ಇಬ್ಬರು ಅಕ್ಟೋಬರ್ 7 ರವರೆಗೆ ಎನ್ ಸಿಬಿ ವಶಕ್ಕೆ
ಈ ಹಿಂದೆ ಇದೇ ಪ್ರಕರಣದಲ್ಲಿ ಎನ್ ಸಿಬಿಯಿಂದ ಬಂಧನಕ್ಕೀಡಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಅಕ್ಟೋಬರ್ 7ರ ವರೆಗೆ ಎನ್ ಸಿಬಿ ವಶಕ್ಕೆ ನೀಡಲಾಗಿದೆ.

ಅಕ್ಬೋಬರ್ 2ರಂದು ರಾತ್ರಿ ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ರೇವ್​ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಬಾಲಿವುಡ್ ಬಾದ್ ಷಾ ಶಾರುಖ್​ ಖಾನ್ ಪುತ್ರ ಆರ್ಯನ್​ ಖಾನ್​ ಸೇರಿದಂತೆ ಎಂಟು ಮಂದಿಯನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

SCROLL FOR NEXT