ದೇಶ

ಸಂಯುಕ್ತ ವ್ಯವಸ್ಥೆಗೆ ವಿರುದ್ಧ: ಬಿಎಸ್ಎಫ್ ಅಧಿಕಾರ ವಿಸ್ತರಿಸುವ ಕೇಂದ್ರದ ನಿರ್ಧಾರ ಒಪ್ಪುವುದಿಲ್ಲ - ಪಂಜಾಬ್ ಸಿಎಂ

Vishwanath S

ಚಂಡಿಗಢ: ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ಈಗಿರುವ 15 ಕಿಮೀಗಳಿಂದ 50 ಕಿಮೀಗಳಿಗೆ ಹೆಚ್ಚಿಸುವ ಕೇಂದ್ರದ ನಿರ್ಧಾರವನ್ನು ಒಪ್ಪುವುದಿಲ್ಲ ಎಂದು ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಚನ್ನಿ ಹೇಳಿದರು.

ಈ ವಿಷಯದ ಕುರಿತು ವಿಶೇಷ ಕ್ಯಾಬಿನೆಟ್ ಸಭೆ, ಸರ್ವಪಕ್ಷ ಸಭೆ ಮತ್ತು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಎಂಬ ಸುಳಿವನ್ನು ಸಿಎಂ ಚನ್ನಿ ನೀಡಿದ್ದಾರೆ. 

ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿಯನ್ನು ತರ್ಕಬದ್ಧವಾಗಿ ಪಂಜಾಬ್ ಭೂಪ್ರದೇಶದ ಒಳಗೆ 50 ಕಿಮೀ ವಿಸ್ತರಿಸಿರುವುದು ಸರ್ವಾಧಿಕಾರಿ ನಿರ್ಧಾರವಾಗಿದ್ದು ಇದನ್ನು ನಾನು ಬಲವಾಗಿ ವಿರೋಧಿಸುತ್ತೇನೆ, ತೀವ್ರವಾಗಿ ಖಂಡಿಸುತ್ತೇನೆ. ಈ ಏಕಪಕ್ಷೀಯ ಕ್ರಮದಿಂದ ಪಂಜಾಬ್ ಜನರು ತೀವ್ರವಾಗಿ ಮನನೊಂದಿದ್ದಾರೆ. ಇದು ಪ್ರಧಾನಿ ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ಮತ್ತು ಸಂಯುಕ್ತ ಒಕ್ಕೂಟದ ವಿರೋಧಿ ನಿರ್ಧಾರ ಎಂದು ಚನ್ನಿ ಟ್ವೀಟ್ ಮಾಡಿದ್ದಾರೆ.

ಪಂಜಾಬಿನ ಸಾಂವಿಧಾನಿಕ ಘನತೆ ಮತ್ತು ಸಂಯುಕ್ತ ಒಕ್ಕೂಟ ಸ್ವಾಯತ್ತತೆಯನ್ನು ಎತ್ತಿಹಿಡಿಯುವ ಈ ಹೋರಾಟದಲ್ಲಿ ಎಲ್ಲಾ ಪಂಜಾಬಿಗಳು ಒಗ್ಗಟ್ಟಿನಿಂದ ಇರಬೇಕು ಎಂದು ಚನ್ನಿ ಹೇಳಿದರು. ಅಗತ್ಯವಿದ್ದಲ್ಲಿ, ಈ ವಿಷಯವನ್ನು ಪರಿಹರಿಸಲು ನಾವು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯುತ್ತೇವೆ. ಈ ಹೋರಾಟದಲ್ಲಿ, ಪಂಜಾಬಿನ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡುವಂತೆ ನಾನು ಒತ್ತಾಯಿಸುತ್ತೇನೆ. ಸುಖಬೀರ್ ಸಿಂಗ್ ಬಾದಲ್ ಅವರು ಈ ಸೂಕ್ಷ್ಮ ವಿಷಯವನ್ನು ಸ್ಥಾಪಿತ ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ದುರುಪಯೋಗ ಮಾಡಿಕೊಳ್ಳದಂತೆ ನಾನು ಎಚ್ಚರಿಸುತ್ತೇನೆ ಎಂದು ಚನ್ನಿ ಮತ್ತೊಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಎಸ್‌ಎಡಿ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಈ ಕುರಿತು ಕ್ರಮ ಕೈಗೊಳ್ಳಲು ಶೀಘ್ರವೇ ಸರ್ವಪಕ್ಷ ಸಭೆ ಕರೆಯುವಂತೆ ವಿನಂತಿಸಿದ ಒಂದು ದಿನದ ನಂತರ ಸಿಎಂ ಚನ್ನಿ ಈ ಹೇಳಿಕೆ ನೀಡಿದ್ದಾರೆ.

SCROLL FOR NEXT