ದೇಶ

ಕುಶಿನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಳೆ ಪ್ರಧಾನಿ ಮೋದಿ ಚಾಲನೆ

Lingaraj Badiger

ಲಖನೌ: ವಿಶ್ವಾದ್ಯಂತ ಬೌದ್ಧ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಉತ್ತರ ಪ್ರದೇಶದ ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಲಿದ್ದಾರೆ.

ಇದೇ ವೇಳೆ ಶ್ರೀಲಂಕಾ ಸಚಿವ ನಾಮಲ್ ರಾಜಪಕ್ಸೆ ನೇತೃತ್ವದ ನಿಯೋಗದಲ್ಲಿ ನಾಳೆ ಉತ್ತರ ಪ್ರದೇಶದ ಕುಶಿನಗರ ವಿಮಾನ ನಿಲ್ದಾಣದಲ್ಲಿ ಕೊಲಂಬೊದಿಂದ ಮೊದಲ ಅಂತಾರಾಷ್ಟ್ರೀಯ ವಿಮಾನ ಬಂದಿಳಿಯಲಿದ್ದು, ಪ್ರಧಾನಿ ಮೋದಿ ಸ್ವಾಗತಿಸಲಿದ್ದಾರೆ.

ಕುಶಿನಗರ, ಗೋರಖ್‌ಪುರ ವಿಭಾಗದಲ್ಲಿ ತುಲನಾತ್ಮಕವಾಗಿ ಹಿಂದುಳಿದ ಜಿಲ್ಲೆ ಎಂದು ಪರಿಗಣಿಸಲಾಗಿದೆ, ಈ ವಿಮಾನ ನಿಲ್ದಾಣವು ಕಾರ್ಯಾರಂಭವಾದ ನಂತರ ಪ್ರವಾಸೋದ್ಯಮದಲ್ಲಿ ಮತ್ತು ಪೂರ್ವ ಉತ್ತರ ಪ್ರದೇಶ ಜನರ ಆದಾಯದಲ್ಲಿ ಭಾರಿ ಏರಿಕೆ ತರುವ ನಿರೀಕ್ಷೆಯಿದೆ.

ಈಗಾಗಲೇ ಲಖನೌ ಮತ್ತು ಪ್ರಧಾನಿ ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ. 2022ರ ವೇಳೆಗೆ ಅಯೋಧ್ಯೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು 2024ರ ವೇಳೆ ಜೇವಾರ್ ವಿಮಾನ ನಿಲ್ದಾಣ ಕಾರ್ಯ ನಿರ್ವಹಿಸಲಿದ್ದು, ಇದರೊಂದಿಗೆ ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ದೇಶದ ಏಕೈಕ ರಾಜ್ಯ ಎಂಬ ಗೌರವಕ್ಕೆ ಪಾತ್ರವಾಗಲಿದೆ.

SCROLL FOR NEXT