ದೇಶ

ಕೋವಿಡ್-19 ಎಫೆಕ್ಟ್: ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ ಎರಡು ವರ್ಷ ಇಳಿಕೆ!

Srinivasamurthy VN

ಮುಂಬೈ: ಕೊರೋನ ವೈರಸ್ ಸಾಂಕ್ರಾಮಿಕವು ವಿವಿಧ ಹಂತಗಳಲ್ಲಿ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಇದೀಗ ನೂತನ ಅಧ್ಯಯನವೊಂದರ ಪ್ರಕಾರ ಕೋವಿಡ್ ನಿಂದಾಗಿ ಭಾರತದಲ್ಲಿ ಮನುಷ್ಯರ ಜೀವಿತಾವಧಿಯಲ್ಲಿ ಎರಡು ವರ್ಷ ಕಡಿತವಾಗಿದೆ ಎಂದು ತಿಳಿದುಬಂದಿದೆ.

ಹೌದು.. ಕೋವಿಡ್-19 ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿನ ಮನುಷ್ಯರ ಜೀವಿತಾವಧಿಯಲ್ಲಿ ಕುಸಿತವನ್ನುಉಂಟುಮಾಡಿದೆ ಎಂದು ನಗರ ಮೂಲದ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ( ಐಐಪಿಎಸ್) ಬಹಿರಂಗಪಡಿಸಿದೆ.

ಸಾಂಕ್ರಾಮಿಕ ರೋಗದಿಂದಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಜನನದ ಸಮಯದಲ್ಲಿ ಜೀವಿತಾವಧಿಯಲ್ಲಿನ ಕುಸಿತವನ್ನು ಸೂಚಿಸುವ ವಿಶ್ಲೇಷಣಾತ್ಮಕ ವರದಿಯು ಇತ್ತೀಚೆಗೆ 'ಬಿಎಂಸಿ ಪಬ್ಲಿಕ್ ಹೆಲ್ತ್' ಜರ್ನಲ್‌ನಲ್ಲಿ ಪ್ರಕಟವಾಗಿತ್ತು.  ಈ ಬಗ್ಗೆ ಐಐಪಿಎಸ್ ಪ್ರೊಫೆಸರ್ ಸೂರ್ಯಕಾಂತ್ ಯಾದವ್ ಅವರು ವರದಿಯನ್ನು ಬರೆದಿದ್ದು, '2019 ರಲ್ಲಿ ಜನನದ ಸಮಯದಲ್ಲಿ ಪುರುಷರಿಗೆ 69. 5 ವರ್ಷಗಳು ಮತ್ತು ಮಹಿಳೆಯರಿಗೆ 72 ವರ್ಷಗಳು. ಇದು 2020 ರಲ್ಲಿ ಕ್ರಮವಾಗಿ 67.5 ವರ್ಷ ಮತ್ತು 69.8 ವರ್ಷಗಳಿಗೆ ಇಳಿದಿದೆ ಎಂದು ವರದಿ ಹೇಳಿದೆ.

ದೇಶದಲ್ಲಿನ ಮರಣದ ಮಾದರಿಗಳ ಮೇಲೆ ಕೋವಿಡ್-19 ನ ಹೊರೆಯ ಪರಿಣಾಮಗಳನ್ನು ನೋಡಲು ಈ ಅಧ್ಯಯನವನ್ನು ನಡೆಸಲಾಗಿತ್ತು.  ನವಜಾತ ಶಿಶುವಿನ ಜನನದ ಸಮಯದಲ್ಲಿ ಮರಣ ಪ್ರಮಾಣವು ಭವಿಷ್ಯದಲ್ಲಿ ಸ್ಥಿರವಾಗಿರುವುದಾದರೆ ನವಜಾತ ಶಿಶುವಿನ ಸರಾಸರಿ ವರ್ಷಗಳ ಆಧಾರದ ಮೇಲೆ ಜನನದ ಜೀವಿತಾವಧಿಯನ್ನು ಲೆಕ್ಕಹಾಕಲಾಗುತ್ತದೆ.  ಪ್ರೊಫೆಸರ್ ಯಾದವ್ ಅವರು ಕೈಗೊಂಡ ಈ ಅಧ್ಯಯನವು 'ಜೀವಿತಾವಧಿಯ ಅಸಮಾನತೆಯ ಉದ್ದ' ಎಂಬ ಅಂಶವನ್ನು ಸಹ ಒಳಗೊಂಡಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ 39 ರಿಂದ 69 ವಯಸ್ಸಿನ ಪುರುಷರ ಗರಿಷ್ಠ ಜೀವಗಳನ್ನು ಬಲಿ ತೆಗೆದುಕೊಂಡಿದೆ ಎಂದು ಕಂಡುಹಿಡಿದಿದೆ.

"ಸಾಮಾನ್ಯ ವರ್ಷಗಳಿಗೆ ಹೋಲಿಸಿದರೆ 2020 ರಲ್ಲಿ 35ರಿಂದ 79 ವಯಸ್ಸಿನವರು ಕೋವಿಡ್-19ಗೆ ಹೆಚ್ಚು ಬಲಿಯಾಗಿದ್ದಾರೆ. ಇದು ಈ ಗುಂಪಿನ ವಯಸ್ಸಿನವರ ಸಂಖ್ಯೆಯ ಕುಸಿತಕ್ಕೆ  ಕಾರಣವಾಗಿದೆ ಎಂದು ಯಾದವ್ ಅಭಿಪ್ರಾಯಪಟ್ಟಿದ್ದಾರೆ.

ಐಐಪಿಎಸ್ ನಿರ್ದೇಶಕ ಡಾ.ಕೆ.ಎಸ್. ಜೇಮ್ಸ್ ಮಾತನಾಡಿ, "ಪ್ರತಿ ಬಾರಿ ನಾವು ಕೆಲವು ಸಾಂಕ್ರಾಮಿಕ ರೋಗಗಳಿಗೆ ತುತ್ತಾದಾಗ, ಜನನದ ಅಂಕಿಅಂಶಗಳಲ್ಲಿನ ಜೀವಿತಾವಧಿಯು ಕ್ಷೀಣಿಸುತ್ತಿದೆ. ಉದಾಹರಣೆಗೆ, ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕ ರೋಗದ ನಂತರ, ಜೀವಿತಾವಧಿಯ ಸರಾಸರಿ ಕುಸಿದಿತ್ತು ಎಂದು ಹೇಳಿದ್ದಾರೆ.

SCROLL FOR NEXT