ದೇಶ

'ಪೆಗಾಸಸ್ ತನಿಖಾ ತಂಡದ ಸದಸ್ಯರಾಗಲು ಹಲವರು ನಿರಾಕರಿಸಿರುವ ವಿಷಯ ಕೇಳಿ ಆತಂಕವಾಗಿದೆ': ಪಿ ಚಿದಂಬರಂ

Sumana Upadhyaya

ನವದೆಹಲಿ: ಪೆಗಾಸಸ್ ವಿವಾದ ಕುರಿತು ತನಿಖಾ ಸಮಿತಿಯ ಸದಸ್ಯರಾಗಲು ಹಲವರು ನಿರಾಕರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ನೀಡಿರುವ ಹೇಳಿಕೆ ಕೇಳಿ ಆತಂಕವಾಗಿದ್ದು, ವಿಚಲಿತನಾಗಿದ್ದೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ತಿಳಿಸಿದ್ದಾರೆ.

ಭಾರತೀಯರು ತಮ್ಮ ಆಡಳಿತ ನಡೆಸುವವರ ಬಗ್ಗೆ ಭಯ ಹೊಂದಿರಬಾರದು ಎಂಬ ಮಹಾತ್ಮ ಗಾಂಧಿಯವರ ಉಪದೇಶದಿಂದ ದೇಶವು ಎಷ್ಟು ದೂರ ಸಾಗಿದೆ ಎಂಬುದು ಈ ಪೆಗಾಸಸ್ ವಿವಾದ ಕುರಿತ ಸುಪ್ರೀಂ ಕೋರ್ಟ್ ಆದೇಶ ತಿಳಿಸುತ್ತದೆ ಎಂದಿದ್ದಾರೆ. ಭಾರತದಲ್ಲಿ ಉದ್ದೇಶಿತ ಕಣ್ಗಾವಲಿಗಾಗಿ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಬಳಕೆಯ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನಿನ್ನೆ ಮೂರು ಸದಸ್ಯರ ಸ್ವತಂತ್ರ ತಜ್ಞರ ಸಮಿತಿಯನ್ನು ರಚಿಸಿದೆ.

ಪೆಗಾಸಸ್ ವಿವಾದ ಕುರಿತು ತನಿಖೆ ನಡೆಸಲು ತಂಡವನ್ನು ರಚಿಸಿದ್ದು ಅದರ ಸದಸ್ಯರಾಗಲು ಹಲವರು ನಿರಾಕರಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿನ ಹೇಳಿಕೆ ನೋಡಿ ವಿಚಲಿತನಾಗಿದ್ದೇನೆ. ಒಬ್ಬ ಆತ್ಮಸಾಕ್ಷಿಯುಳ್ಳ ನಾಗರಿಕನು ರಾಷ್ಟ್ರೀಯ ಹಿತಾಸಕ್ತಿಯ ವಿಷಯದಲ್ಲಿ ಸೇವೆ ಸಲ್ಲಿಸಲು ಸುಪ್ರೀಂ ಕೋರ್ಟ್‌ನ ವಿನಂತಿಯನ್ನು ನಿರಾಕರಿಸಬಹುದೇ? ಎಂದು ಚಿದಂಬರಂ ಪ್ರಶ್ನೆ ಮಾಡಿದ್ದಾರೆ. 

ಭಾರತೀಯರು ತಮ್ಮ ಆಡಳಿತಗಾರರಿಗೆ ಭಯಪಡಬಾರದು ಎಂಬ ಮಹಾತ್ಮ ಗಾಂಧಿಯವರ ಉಪದೇಶದಿಂದ ನಾವು ಎಷ್ಟು ದೂರ ಹೋಗಿದ್ದೇವೆ ಎಂದು ಈ ಪ್ರಕರಣ ಸೂಚಿಸುತ್ತದೆ ಎಂದು ಕೂಡ ಚಿದಂಬಂರಂ ಹೇಳಿದ್ದಾರೆ.

ನಾಗರಿಕರ ಗೌಪ್ಯತೆಯ ಹಕ್ಕನ್ನು ರಕ್ಷಿಸುವ ವಿಷಯದ ಕುರಿತ ಮಹತ್ವದ ತೀರ್ಪಿನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು, ಕಾನೂನಿನ ಆಡಳಿತದಲ್ಲಿರುವ ಪ್ರಜಾಪ್ರಭುತ್ವ ದೇಶದಲ್ಲಿ ವ್ಯಕ್ತಿಗಳ ಮೇಲೆ ವಿವೇಚನಾರಹಿತ ಬೇಹುಗಾರಿಕೆಗೆ ಅನುಮತಿಯಿಲ್ಲ ಎಂದು ವಾದಿಸಿತು. 

SCROLL FOR NEXT