ದೇಶ

ಒಳ ಉಡುಪಿನಲ್ಲೇ ರೈಲಿನಲ್ಲಿ ಓಡಾಡಿದ್ದ ಜೆಡಿಯು ಶಾಸಕನ ವಿರುದ್ಧ ಪ್ರಕರಣ ದಾಖಲು

Nagaraja AB

ನವದೆಹಲಿ: ಪಾಟ್ನಾ- ನವದೆಹಲಿ ನಡುವಿನ ರೈಲಿನಲ್ಲಿ ಒಳ ಉಡುಪಿನಲ್ಲಿ ಓಡಾಡಿ, ಸಹ ಪ್ರಯಾಣಿಕರೊಂದಿಗೆ ಜಗಳವಾಡಿದ್ದ ಬಿಹಾರದ ಆಡಳಿತಾರೂಢ ಜೆಡಿಯು ಪಕ್ಷದ ಶಾಸಕ ಗೋಪಾಲ್ ಮಂಡಲ್ ವಿರುದ್ಧ ದಾಖಲಾಗಿದ್ದ ದೂರಿನ ಆಧಾರದ ಮೇಲೆ 
ಆರಾದ ಜಿಆರ್ ಪಿ ಠಾಣೆಯಲ್ಲಿ ಶನಿವಾರ ಎಫ್ ಐಆರ್ ದಾಖಲಿಸಲಾಗಿದೆ.

ರೈಲು ನವದೆಹಲಿಗೆ ತಲುಪಿದ ಕೂಡಲೇ ಜಿಆರ್ ಪಿ ಠಾಣೆಯಲ್ಲಿ ದೂರುದಾರ ಪ್ರಹ್ಲಾದ್ ಪಾಸ್ವನ್ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಶಾಸಕ ಗೋಪಾಲ್ ಮಂಡಲ್ ಸಂಚರಿಸುತ್ತಿದ್ದ ರೈಲಿನಲ್ಲಿ ತಾನು ಕೂಡಾ ಪ್ರಯಾಣಿಸುತ್ತಿದ್ದೆ, ಆಗ ಒಳ ಉಡುಪಿನಲ್ಲಿ ಶೌಚಾಲಯದ ಕಡೆಗೆ ತೆರಳುತ್ತಿದ್ದ ಮಂಡಲ್ ಅವರನ್ನು ನೋಡಿ, ಅಸಮಾಧಾನ ವ್ಯಕ್ತಪಡಿಸಿದಾಗ, ಶಾಸಕರು ಹಾಗೂ ಅವರ ಕಡೆಯವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ ಎಂದು ಪಾಸ್ವಾನ್ ಆರೋಪಿಸಿದ್ದಾರೆ.

ಅಲ್ಲದೇ ದಾಳಿಕೋರರು, ತಮ್ಮ ಬಳಿಯಿದ್ದ ಕೈ ಬೆರಳು ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ. ಅಲ್ಲದೇ, ಶೌಚಾಲಯದ ಟ್ಯಾಪ್ ನಿಂದ ತೆಗೆದ ನೀರನ್ನು ಕುಡಿಯಲು ಒತ್ತಾಯಿಸಿದ್ದರು ಎಂದು ಪಾಸ್ವಾನ್ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಪಾಸ್ವನ್ ದಾಖಲಿಸಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಿದ್ದು, ಪಾಟ್ನಾದ ಸಂಬಂಧಿತ ಪ್ರಾಧಿಕಾರಕ್ಕೆ ವರ್ಗಾವಣೆ ಮಾಡಲಾಗಿದೆ.

ಎಫ್ ಐಆರ್ ನಲ್ಲಿ ಮಾಡಲಾಗಿರುವ ಆರೋಪಗಳ ಬಗ್ಗೆ ಶಾಸಕ ಗೋಪಾಲ್ ಮಂಡಲ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್,  ವಿಚಾರಣೆ ಆಗುವವರೆಗೂ ಏನನ್ನು ಹೇಳುವುದಿಲ್ಲ ಎಂದಿದ್ದಾರೆ.

SCROLL FOR NEXT