ದೇಶ

ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ವಿರುದ್ಧ ಇಡಿ ಲುಕ್ ಔಟ್ ನೊಟೀಸ್

Srinivas Rao BV

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಗೆ ಜಾರಿ ನಿರ್ದೇಶನಾಲಯ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶ್ ಮುಖ್ ಗೆ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದ್ದು,  ದೇಶ ಬಿಟ್ಟು ಹೋಗದಂತೆ ತಡೆಯುವುದು ಇದರ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಹಲವು ಬಾರಿ ಅನಿಲ್ ದೇಶ್ ಮುಖ್ ಗೆ ಸಮನ್ಸ್ ಜಾರಿಗೊಳಿಸಿದ್ದರೂ ಅದಕ್ಕೆ ಮಾಜಿ ಸಚಿವರು ಸ್ಪಂದಿಸಿರಲಿಲ್ಲ. ಸಮನ್ಸ್ ಜಾರಿಗೊಂಡಿದ್ದು ಅನಿಲ್ ದೇಶ್ ಮುಖ್ ಅವರ ಸಚಿವ ಸ್ಥಾನಕ್ಕೂ ಕುತ್ತು ತಂದಿತ್ತು.

ಜಾರಿ ನಿರ್ದೇಶನಾಲಯದ ನೊಟೀಸ್ ಗೆ ಮಧ್ಯಂತರ ತಡೆ ನೀಡುವುದಕ್ಕೆ ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅನಿಲ್ ದೇಶ್ ಮುಖ್ ನೊಟೀಸ್ ಗಳಿಗೆ ಸ್ಪಂದಿಸದ ಕಾರಣ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದೆ.

ಜಾರಿ ನಿರ್ದೇಶನಾಲಯದ ಸಮನ್ಸ್ ಗಳನ್ನು ರದ್ದುಗೊಳಿಸಬೇಕೆಂದು ಅನಿಲ್ ದೇಶ್ ಮುಖ್ ಸೆ.2 ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅದನ್ನು ತಕ್ಷಣ ವಿಚಾರಣೆಗೆ ಕೈಗೆತ್ತಿಕೊಳ್ಳಲಿಲ್ಲ.

ಈವರೆಗೂ ಅನಿಲ್ ದೇಶ್ ಮುಖ್ ಗೆ 5 ಸಮನ್ಸ್ ಗಳನ್ನು ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಪ್ರತಿ ಸಮನ್ಸ್ ನ್ನೂ ದೇಶ್ ಮುಖ್ ನಿರ್ಲಕ್ಷ್ಯ ಮಾಡುತ್ತಾ ಬಂದರು. ಸಿಬಿಐ ಅನಿಲ್ ದೇಶ್ ಮುಖ್ ಅವರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಿಸಿದ್ದ ಆಧಾರದಲ್ಲಿ ಇ.ಡಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿಕೊಂಡಿತ್ತು.

ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅನಿಲ್ ದೇಶ್ ಮುಖ್ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮೂಲಕ ವಿವಿಧ ಬಾರ್, ರೆಸ್ಟೊರೆಂಟ್ ಗಳ ಮೂಲಕ 4.70 ಕೋಟಿ ರೂಪಾಯಿ ವಸೂಲಿ ಮಾಡಿದ್ದರು ಎಂಬ ಆರೋಪ ಮಾಜಿ ಗೃಹ ಸಚಿವರ ವಿರುದ್ಧ ಇದೆ.

SCROLL FOR NEXT