ದೇಶ

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಮತ್ತೆ 'ಸೂಪರ್‌ಕಾಪ್' ಆಗಲು ಬಯಸಿದ್ದರು; ಎನ್ಐಎ

Lingaraj Badiger

ಮುಂಬೈ: ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಉದ್ಯಮಿ ಮುಖೇಶ್ ಅಂಬಾನಿಯವರ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‌ಯುವಿಯನ್ನು ತಂದು ನಿಲ್ಲಿಸುವ ಮೂಲಕ ತಮ್ಮ "ಸೂಪರ್‌ಕಾಪ್" ಖ್ಯಾತಿಯನ್ನು ಮರಳಿ ಪಡೆಯಲು ಬಯಸಿದ್ದರು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

ಥಾಣೆ ಉದ್ಯಮಿ ಮನ್ಸುಖ್ ಹಿರನ್ ಅವರನ್ನು ಕೊಲೆ ಮಾಡಲಾಗಿದೆ ಎಂದು ಎನ್ಐಎ ಹೇಳಿದ್ದು, ಈ ಹತ್ಯೆಯನ್ನು ಕಾರ್ಯಗತಗೊಳಿಸಲು ಮಾಜಿ ಪೊಲೀಸ್ ಅಧಿಕಾರಿಯಾಗಿದ್ದ ಪ್ರದೀಪ್ ಶರ್ಮಾ ಅವರನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸವಾಗಿದೆ.

"ಈ ಪ್ರಕರಣದಲ್ಲಿ ಶ್ರೀಮಂತ ಮತ್ತು ಸಮೃದ್ಧ ಜನರನ್ನು ಭಯಭೀತರನ್ನಾಗಿಸುವ ಉದ್ದೇಶವು ಸ್ಪಷ್ಟವಾಗಿದೆ. ಅಲ್ಲದೆ ಅವರ ಭಯ ಹುಟ್ಟಿಸಿ ಸುಲಿಗೆ ಮಾಡುವುದು ಇವರ ಉದ್ದೇಶವಾಗಿತ್ತು" ಎಂದು ಚಾರ್ಜ್ ಶೀಟ್ ಹೇಳಿದೆ.

ಕಳೆದ ಶುಕ್ರವಾರ ಎನ್ಐಎ, ಅಂಬಾನಿ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಮತ್ತು ಮನ್ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇತರ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

ಫೆ. 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಸ್ಫೋಟಕ ತುಂಬಿದ್ದ ವಾಹನದಲ್ಲಿ ಬೆದರಿಕೆಯ ಪತ್ರವೂ ಇತ್ತು. 

ಮುಕೇಶ್ ಅವರ ನಿವಾಸ ಆಂಟಿಲಿಯಾ ಬಳಿ ಪತ್ತೆಯಾಗಿದ್ದ ವಾಹನವು ಮನ್‌ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು, ಈ ವಾಹನ ಕಳವಾಗಿದ್ದ ಕುರಿತು ಕೆಲವು ದಿನಗಳ ಹಿಂದೆಯಷ್ಟೇ ಹಿರೇನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾರ್ಚ್ 5ರಂದು ಹಿರೇನ್ ಅವರ ಶವವು ಠಾಣೆ ಸಮೀಪ ಪತ್ತೆಯಾಗಿತ್ತು.

ಗಂಡನ ಅನುಮಾನಾಸ್ಪದ ಸಾವಿನಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಪಾತ್ರವಿದೆಯೆಂದು ಆರೋಪಿಸಿ ಹಿರೇನ್ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಸಚಿನ್ ಅವರನ್ನು ಮುಂಬೈ ಅಪರಾಧ ತನಿಖಾ ದಳದಿಂದ ಹೊರಗಿಡಲಾಗಿತ್ತು.

SCROLL FOR NEXT