ದೇಶ

ಆರ್ ಜೆಡಿ ಬಿಕ್ಕಟ್ಟು: ಪ್ರತ್ಯೇಕ ಸಂಘಟನೆ ಆರಂಭಿಸಿದ ಲಾಲು ಪುತ್ರ ತೇಜ್ ಪ್ರತಾಪ್ ಯಾದವ್

Srinivasamurthy VN

ಪಾಟ್ನಾ: ತಮ್ಮದೇ ರಾಜಕೀಯ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ತಮ್ಮದೇ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ಹೌದು.. ತೇಜ್ ಪ್ರತಾಹ್ ಯಾದವ್ ಮತ್ತು ಆರ್ ಜೆಡಿ ನಡುವಿನ ಅಂತರ ಹೆಚ್ಚಾಗಿರುವಂತೆಯೇ ಇತ್ತ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ತಮ್ಮದೇ ಪ್ರತ್ಯೇಕ ಸಂಘಟನೆಯನ್ನು ಸ್ಥಾಪಿಸಿದ್ದಾರೆ.

ಮೂಲಗಳ ಪ್ರಕಾರ ಎರಡು ದಿನಗಳ ಹಿಂದೆಯೇ ತೇಜ್ ಪ್ರತಾಪ್ ಯಾದವ್ ಅವರು ‘ಛಾತ್ರ ಜನಶಕ್ತಿ ಪರಿಷತ್‌‘ ಎಂಬ ಹೊಸ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಆರ್‌ಜೆಡಿಯಲ್ಲಿ ಛಾತ್ರ ವಿದ್ಯಾರ್ಥಿ ಸಂಘಟನೆ ಎಂಬ ವಿಭಾಗವಿದೆ. ಇದು ಅದಕ್ಕೆ ಪರ್ಯಾಯವಾಗಿ ಆರಂಭಿಸಿರುವ ಸಂಘಟನೆ ಎಂದು ಹೇಳಲಾಗುತ್ತಿದೆ.

ಆದರೆ, ತೇಜ್‌ಪ್ರತಾಪ್ ಯಾದವ್, ‘ಇದು ಆರ್‌ಜೆಡಿಗೆ ಪಕ್ಷದ ವಿದ್ಯಾರ್ಥಿ ವಿಭಾಗದ ಪರ್ಯಾಯ ಸಂಘಟನೆಯಲ್ಲ. ಇದೊಂದು ವಿದ್ಯಾರ್ಥಿ ಸಂಘಟನೆ. ಮಾತೃಪಕ್ಷ ಆರ್‌ಜೆಡಿಯನ್ನು ಗ್ರಾಮ ಮಟ್ಟದಲ್ಲಿ ಬಲಗೊಳಿಸುವುದಕ್ಕಾಗಿ ಹಾಗೂ ಗ್ರಾಮ ಮಟ್ಟದಲ್ಲಿ ಯುವಕರನ್ನು ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳುವುದು ಹಾಗೂ ರಾಜ್ಯದ ಹೊರಗೆ ಪಕ್ಷವನ್ನು ಸಂಘಟಿಸುವ ಸಂಸ್ಥೆ ಎಂದು ತೇಜ್‌ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ತೇಜ್ ಪ್ರತಾಪ್‌ ರಾಷ್ಟ್ರೀಯ ಜನತಾ ದಳದ ಹಿರಿಯ ನಾಯಕ ಜಗದಾನಂದ ಸಿಂಗ್‌ ಅವರ ಜತೆ ಅನುಚಿತವಾಗಿ ವರ್ತಸಿದ್ದರು. ಅಣ್ಣನ ನಡೆಯ ಬಗ್ಗೆ ತೇಜಸ್ವಿ ಯಾದವ್‌ ಕೂಡ ಬೇಸರ ವ್ಯಕ್ತಪಡಿಸಿದ್ದರು. ಹಿರಿಯರಿಗೆ ಗೌರವ ಕೊಡಬೇಕು ತೇಜ್‌ ಪ್ರತಾಪ್‌ ಯಾದವ್‌ ಶಿಸ್ತಿನಿಂದ ವರ್ತಿಸಬೇಕು ಎಂದು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅಣ್ಣನಿಗೆ ಕಿವಿಮಾತು ಹೇಳಿದ್ದಾರೆ. 

ನಮ್ಮದು ಶಿಸ್ತಿನ ಕುಟುಂಬ, ನಮ್ಮ ತಂದೆ ತಾಯಿ ಒಳ್ಳೆಯ ಸಂಸ್ಕೃತಿ ಮತ್ತು ಉತ್ತಮ ನಡವಳಿಕೆಯನ್ನು ಕಲಿಸಿಕೊಟ್ಟಿದ್ದಾರೆ, ತೇಜ್‌ ಪ್ರತಾಪ್‌ ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಲ್ಲದೆ ತೇಜ್‌ ಪ್ರತಾಪ್‌ ವರ್ತನೆ ಬಗ್ಗೆ ತಂದೆ ಲಾಲು ಪ್ರಸಾದ್‌ ಯಾದವ್‌ ಹಾಗೂ ತಾಯಿ ರಾಬ್ಡಿ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತೇಜಸ್ವಿ ಯಾದವ್‌ ಹೇಳಿದ್ದರು.
 

SCROLL FOR NEXT