ದೇಶ

ಅಸ್ಸಾಂ: ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳ ನಡುವೆ ಡಿಕ್ಕಿ, ಓರ್ವ ಸಾವು, 35ಕ್ಕೂ ಹೆಚ್ಚು ಮಂದಿ ನಾಪತ್ತೆ

Lingaraj Badiger

ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಎರಡು ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು, ಸುಮಾರು 35ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಇಂದು ಮಧ್ಯಾಹ್ನ 3.30ರ ಸುಮಾರಿಗೆ ಜೊರ್ಹಾತ್ ಜಿಲ್ಲೆಯ ನಿಮಾತಿ ಘಾಟ್ ನಲ್ಲಿ ಈ ಘಟನೆ ನಡೆದಿದ್ದು, ಮಾ ಕಮಲ ದೋಣಿ ನಿಮಾತಿ ಘಾಟ್ ನಿಂದ ಮಜುಲಿಗೆ ಸಂಚರಿಸುತ್ತಿದ್ದಾಗ ಮಜುಲಿಯಿಂದ ವಾಪಸ್ಸಾಗುತ್ತಿದ್ದ ಸರ್ಕಾರಿ ಸ್ವಾಮ್ಯದ ಟ್ರಿಪ್ಕೈಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದೋಣಿ ಮುಳುಗಿದೆ.

ಅಧಿಕೃತ ಮೂಲಗಳ ಪ್ರಕಾರ, ಇಲ್ಲಿಯವರೆಗೆ ಒಬ್ಬ ವ್ಯಕ್ತಿಯ ಮೃತದೇಹವನ್ನು ಹೊರ ತೆಗೆಯಲಾಗಿದ್ದು, 42 ಜನರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ ಅಥವಾ ಸ್ಥಳೀಯರು ರಕ್ಷಿಸಿದ್ದಾರೆ. ರಕ್ಷಿಸಿದ ಪ್ರಯಾಣಿಕರಲ್ಲಿ ಏಳು ಮಕ್ಕಳು ಸೇರಿದ್ದಾರೆ. ರಕ್ಷಿಸಿದ ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

"ಬಹುಶಃ ಸಂವಹನ ಸಮಸ್ಯೆಯಿಂದ ಎರಡು ದೋಣಿಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ನಂತರ, ಒಂದು ಮುಳುಗಿದೆ. ಎರಡನೇ ದೋಣಿ ಕೂಡ ಮುಳುಗುವ ಹಂತದಲ್ಲಿತ್ತು. ಆದರೆ ಪೊಲೀಸರು ಮತ್ತು ಸ್ಥಳೀಯರು ಅದನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಜೋರ್ಹತ್ ಪೊಲೀಸ್ ವರಿಷ್ಠಾಧಿಕಾರಿ ಅಂಕುರ್ ಜೈನ್ ತಿಳಿಸಿದ್ದಾರೆ.

ದೋಣಿ ಯಲ್ಲಿ ಸುಮಾರು 75 ಜನರು ಇದ್ದರು ಮತ್ತು ಸುಮಾರು 35 ಜನರು ನಾಪತ್ತೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

"ಮುಳುಗಿದ ದೋಣಿಯನ್ನು ಸುಮಾರು 350 ಮೀಟರ್ ದೂರದಲ್ಲಿ ಹೊರ ತೆಗೆಯಲಾಗಿದೆ. ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ) ಮತ್ತು ಎಸ್‌ಡಿಆರ್‌ಎಫ್ (ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ) ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ತಿಳಿಸಿದ್ದಾರೆ.

SCROLL FOR NEXT