ದೇಶ

ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆ; ಯಾರೊಂದಿಗೂ ಮೈತ್ರಿ ಇಲ್ಲ: ಸಲ್ಮಾನ್ ಖುರ್ಷಿದ್

Shilpa D

ಲಕ್ನೋ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಯಾರೋಂದಿಗೂ ಮೈತ್ರಿ ಮಾಡಿಕೊಳ್ಳದೇ ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ದೃಢ ನಂಬಿಕೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ಪಕ್ಷ ಕಾರ್ಯಕರ್ತರು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತಾರೆ ಎಂದು ಹೇಳಿದರು.

ಮುಂಬರುವ ಚುನಾವಣೆಗಳ ಕಾಂಗ್ರೆಸ್ ಪ್ರಣಾಳಿಕೆಯ ಕುರಿತು ಮಾತನಾಡಿದ ಅವರು, ನಾವು ಸಾಮಾನ್ಯ ಜನರೊಂದಿಗೆ ಸಂವಹನ ನಡೆಸುತ್ತಿದ್ದೇವೆ. ಇದಕ್ಕಾಗಿ ನಾವು ಉತ್ತಮ ಕಾರ್ಯತಂತ್ರವನ್ನು ರೂಪಿಸಿದ್ದೇವೆ. ಪ್ರಣಾಳಿಕೆಯಲ್ಲಿ ಸಾಮಾನ್ಯ ಜನರ ಧ್ವನಿಯು ಇರುತ್ತದೆ. ರೈತರು ಮತ್ತು ಮಹಿಳೆಯರ ಭದ್ರತೆ ನಮ್ಮ ಪ್ರಥಮ ಆದ್ಯತೆ. ನಾವು ಇಂದು ಆಗ್ರಾ ಜನರನ್ನು ಭೇಟಿ ಮಾಡಿದ್ದೇವೆ ಮತ್ತು ಅವರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ.

ಅಯೋಧ್ಯೆ, ಜಾನ್ಸಿ, ಗೋರಖ್‍ಪುರ ಇತ್ಯಾದಿಗಳಿಗೆ ಭೇಟಿ ನೀಡಿದ್ದೇವೆ ಮತ್ತು ಆಗ್ರಾದ ತೋರಾ ಹಳ್ಳಿಯ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇವೆ. ಅಲ್ಲಿನ ಜನರು, ವಿಧವೆಯರು ಮತ್ತು ವೃದ್ಧರು ಪಿಂಚಣಿ ಹಣ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತಂತೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.
 

SCROLL FOR NEXT