ದೇಶ

ಶೇ.75 ರಷ್ಟು ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಅಧಿಕ ಶುಲ್ಕ!

Srinivas Rao BV

ಮುಂಬೈ: ಕೋವಿಡ್-19 ರೋಗಿಗಳ ಪೈಕಿ ಶೇ.75 ರಷ್ಟು ಮಂದಿಗೆ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಿಧಿಸಲಾಗಿದೆ ಎಂದು ಮಹಾರಷ್ಟ್ರದಲ್ಲಿ ನಡೆಸಿದ ಸಮೀಕ್ಷೆಯ ಮೂಲಕ ತಿಳಿದುಬಂದಿದೆ. 

ಈ ಪೈಕಿ ಅರ್ಧದಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬುದು ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಹೆಲ್ತ್ ಕೇರ್ ಸೆಕ್ಟರ್ ನಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ಕಾರ್ಯಕರ್ತರ ಸಂಘಟನೆಯಾಗಿರುವ ಜನ್ ಆರೋಗ್ಯ ಅಭಿಯಾನ್ ನ ಭಾಗವಾಗಿರುವ ಡಾ. ಅಭಯ್ ಶುಕ್ಲಾ ಈ ಬಗ್ಗೆ ಮಾತನಾಡಿದ್ದು, 2,579 ರೋಗಿಗಳನ್ನು ಸಮೀಕ್ಷೆ ನಡೆಸಲಾಗಿದೆ. ಅವರ ಸಂಬಂಧಿಕರೊಂದಿಗೆ ಮಾತನಾಡಲಾಗಿದೆ. ಆಸ್ಪತ್ರೆಗಳ ಬಿಲ್ ನ್ನು ಆಡಿಟ್ ಮಾಡಿದ್ದಾರೆ. ಶೇ.95 ರಷ್ಟು ಮಂದಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶೇ.75 ರಷ್ಟು ಮಂದಿ ಅಧಿಕ ಶುಲ್ಕವನ್ನು ಪಾವತಿಸಿದ್ದಾರೆ. ಎರಡನೇ ಅಲೆಯಲ್ಲಿ ಕೋವಿಡ್-19 ಸೋಂಕಿಗೆ ಗುರಿಯಾಗಿದ್ದ ರೋಗಿಗಳು ಆಸ್ಪತ್ರೆಗೆ ಸೇರಿ ಸರಾಸರಿ ಅಧಿಕ ಶುಲ್ಕ 10,000 ರೂಪಾಯಿಗಳಿಂದ 1 ಲಕ್ಷ ರೂಪಾಯಿಗಳವರೆಗೆ ಪಾವತಿಸಿದ್ದಾರೆ ಎಂದು ಡಾ. ಶುಕ್ಲಾ ಮಾಹಿತಿ ನೀಡಿದ್ದಾರೆ.

ಈ ಪೈಕಿ ಕನಿಷ್ಟ 220 ಮಂದಿ ಮಹಿಳೆಯರಿದ್ದು ವಾಸ್ತವಾಗಿ ತಗುಲುವ ಚಿಕಿತ್ಸಾ ವೆಚ್ಚಕ್ಕಿಂತ 1-2 ಲಕ್ಷ ರೂಪಾಯಿ ಹೆಚ್ಚಿನ ಹಣವನ್ನು ಆಸ್ಪತ್ರೆಗಳಿಗೆ ಪಾವತಿ ಮಾಡಿದ್ದಾರೆ, 212 ಪ್ರಕರಣಗಳಲ್ಲಿ ರೋಗಿಗಳು ಅಥವಾ ಸಂಬಂಧಿಕರು 2 ಲಕ್ಷಕ್ಕಿಂತಲೂ ಹೆಚ್ಚಿನ ಹಣವನ್ನು ಹೆಚ್ಚಾಗಿ ಆಸ್ಪತ್ರೆಗಳಿಗೆ ಪಾವತಿಸಿದ್ದಾರೆ ಎಂದು ಶುಕ್ಲಾ ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಕೋವಿಡ್-19 ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಅತಿ ಹೆಚ್ಚು ಶುಲ್ಕ ವಸೂಲಿ ಮಾಡುವುದಕ್ಕೆ ನಿಯಂತ್ರಣ ವಿಧಿಸಿ ಆದೇಶ ಹೊರಡಿಸಿದ್ದರೂ ಅದು ಪ್ರಯೋಜನವಾಗಿಲ್ಲ.

ರೋಗಿಗಳು ಅಥವಾ ಅವರ ಕುಟುಂಬ ಸದಸ್ಯರು ಈ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟನ್ನು ಎದುರಿಸಿದ್ದು ಚಿನ್ನಾಭರಣಗಳನ್ನು ಅಡವಿಟ್ಟಿದ್ದಾರೆ ಸಂಬಂಧಿಕರಿಂದ, ಹಣ ಸಾಲ ನೀಡುವವರಿಂದ ಸಾಲ ಪಡೆದಿದ್ದು ಆಸ್ಪತ್ರೆಯ ಶುಲ್ಕವನ್ನು ಭರಿಸಿದ್ದಾರೆ. 

ಇನ್ನೂ ಹಲವೆಡೆ ಆಸ್ಪತ್ರೆಯ ಶುಲ್ಕ ಇತ್ಯರ್ಥಗೊಳಿಸದ ಹಿನ್ನೆಲೆಯಲ್ಲಿ ಮೃತಪಟ್ಟವರ ಮೃತದೇಹವನ್ನು ನೀಡದೇ ಆಸ್ಪತ್ರೆ ತಗಾದೆ ತೆಗೆದ ಪರಿಣಾಮ ಕುಟುಂಬ ಸದಸ್ಯರು ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣವೂ ವರದಿಯಾಗಿದೆ.

SCROLL FOR NEXT