ದೇಶ

ಪತ್ನಿ ಮಗು ಪಡೆಯಲು ಗಂಡನಿಗೆ 15 ದಿನ ಪೆರೋಲ್: ರಾಜಸ್ಥಾನ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಹೇಳಿದ್ದಿಷ್ಟು...

Ramyashree GN

ನವದೆಹಲಿ: ತಾಯಿಯಾಗಲು ಬಯಸಿದ ಮಹಿಳೆಯ ಮನವಿಯನ್ನು ಪುರಸ್ಕರಿಸಿದ್ದ ರಾಜಸ್ಥಾನ ಹೈಕೋರ್ಟ್, ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಅಪರಾಧಿಗೆ 15 ದಿನಗಳ ಪೆರೋಲ್ ನೀಡಿದ್ದ ಪ್ರಕರಣದಲ್ಲಿ ಮಧ್ಯೆ ಪ್ರವೇಶಿಸಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಅಪರಾಧಿಗೆ ಪೆರೋಲ್ ನೀಡಿರುವ ಹೈಕೋರ್ಟ್ ತೀರ್ಪನ್ನು ರಾಜಸ್ಥಾನ ಸರ್ಕಾರವು ಕಳೆದ ತಿಂಗಳು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 'ಈ ಆದೇಶದಿಂದಾಗಿ ಅನೇಕ ಅಪರಾಧಿಗಳು ಕೂಡ ಇದೇ ಆಧಾರದ ಮೇಲೆ ಪೆರೋಲ್‌ಗೆ ಅರ್ಜಿ ಸಲ್ಲಿಸುತ್ತಿದ್ದಾರೆ' ಎಂದು ಅರ್ಜಿಯಲ್ಲಿ ಪ್ರತಿಪಾದಿಸಿತ್ತು.

ನ್ಯಾಯಾಧೀಶರಾದ ಸಂಜೀವ್ ಖನ್ನಾ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು, ಇದೇ ಆಧಾರದ ಮೇಲೆ ಇತರ ಯಾವುದೇ ಅಪರಾಧಿಗಳು ಪೆರೋಲ್ ಪಡೆದರೆ ಮತ್ತು ರಾಜಸ್ಥಾನ ಸರ್ಕಾರಕ್ಕೆ ಆ ಬಗ್ಗೆ ಆಕ್ಷೇಪಣೆ ಇದ್ದರೆ, ಅವರು ಹೈಕೋರ್ಟ್ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ನಿಮ್ಮ ಈ ಕಳವಳವನ್ನು ನೇರವಾಗಿ ನೀವೇ ಹೈಕೋರ್ಟ್ ಗಮನಕ್ಕೆ ತನ್ನಿ ಎಂದೂ ರಾಜಸ್ಥಾನ ಸರ್ಕಾರಕ್ಕೆ ತಿಳಿಸಿದೆ. ಆದರೆ, ಈ ವಿಚಾರದಲ್ಲಿ ಸುಪ್ರೀಂ ಮಧ್ಯೆ ಪ್ರವೇಶಿಸುವುದಿಲ್ಲ ಎಂದು ತಿಳಿಸಿದೆ.

ಮಹಿಳೆಯೊಬ್ಬರು ನನಗೆ 'ಸಂತಾನ ಬೇಕು' ಎಂದು ಉಲ್ಲೇಖಿಸಿ, ನನಗೆ ಮಗುವನ್ನು ಹೊಂದಲು ಅವಕಾಶ ನೀಡಬೇಕು. ಹೀಗಾಗಿ ತಮ್ಮ ಪತಿಗೆ 15 ದಿನಗಳ ಪೆರೋಲ್ ನೀಡಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇವರ ಮನವಿಯನ್ನು ಪುರಸ್ಕರಿಸಿದ್ದ ರಾಜಸ್ಥಾನ ಹೈಕೋರ್ಟ್, ಏಪ್ರಿಲ್ 18ರಂದು ಅಜ್ಮೀರ್ ಸೆಂಟ್ರಲ್ ಜೈಲಿನಲ್ಲಿದ್ದ ನಂದ ಲಾಲ್‌ಗೆ ಪೆರೋಲ್ ನೀಡಿತು.

ತಾನು ಯಾವುದೇ ಅಪರಾಧ ಮಾಡದಿದ್ದರೂ ಮತ್ತು ಯಾವುದೇ ಶಿಕ್ಷೆಗೆ ಒಳಗಾಗದಿದ್ದರೂ ಕೂಡ, ಸಂತಾನವನ್ನು ಹೊಂದುವ ತನ್ನ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದರು.

SCROLL FOR NEXT