ದೇಶ

ಮಧ್ಯಪ್ರದೇಶ: ಪಂಚಾಯತ್‌ ಚುನಾವಣೆಯಲ್ಲಿ ಗೆದ್ದದ್ದು ಪತ್ನಿಯರು, ಪ್ರಮಾಣ ವಚನ ಸ್ವೀಕರಿಸಿದ್ದು ಮಾತ್ರ ಪತಿ ಮಹಾಶಯರು!

Srinivasamurthy VN

ದಾಮೋಹ್: ಪಂಚಾಯತ್‌ ಚುನಾವಣೆಯಲ್ಲಿ ಗೆದ್ದ ಪತ್ನಿಯರ ಬದಲಿಗೆ ಅವರ ಗಂಡಂದಿರು ಪ್ರಮಾಣವಚನ ಸ್ವೀಕರಿಸಿರುವ ವಿಚಿತ್ರ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗೈಸಾಬಾದ್ ಗ್ರಾಮ ಪಂಚಾಯತ್‌ನಲ್ಲಿ ಹೊಸದಾಗಿ ಚುನಾಯಿತರಾದ ಮಹಿಳಾ ಸರಪಂಚ್‌ನ ಪತಿ ತನ್ನ ಪತ್ನಿಯ ಬದಲಿಗೆ ಪ್ರಮಾಣ ವಚನ ಸ್ವೀಕರಿಸಿದ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗ್ರಾಮದ ಮೂರು ಹಂತದ ಪಂಚಾಯತ್ ಚುನಾವಣೆಯ ನಂತರ, ಪರಿಶಿಷ್ಟ ವರ್ಗದ ಮಹಿಳಾ ಅಭ್ಯರ್ಥಿ ಗೆದ್ದು ಸರಪಂಚ್ ಆಗಿ ಚುನಾಯಿತರಾದರು. ಅಂತೆಯೇ ಇತರ ಕೆಲ ಮಹಿಳಾ ಅಭ್ಯರ್ಥಿಗಳು ಸಹ ಜಯಶಾಲಿಯಾದರು. 

ಆದರೆ, ಪ್ರಮಾಣ ವಚನ ಸ್ವೀಕಾರದ ವೇಳೆ ಮಹಿಳೆಯರ ಬದಲಿಗೆ ಅವರ ಪತಿಯಂದಿರು ಹಾಜರಾಗಿದ್ದರು ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿವಾದಕ್ಕೆ ಕಾರಣವಾಗಿತ್ತು. ಚುನಾಯಿತ ಸರಪಂಚ್ ಮತ್ತು ಇತರ ಮಹಿಳೆಯರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಾಗುವುದು, ಇದಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ ಚುನಾಯಿತ ಮಹಿಳಾ ಪ್ರತಿನಿಧಿಗಳ ಬದಲಿಗೆ ಅವರ ಗಂಡಂದಿರು ಹಾಜರಾಗಿ ಪ್ರಮಾಣ ವಚನ ಸ್ವೀಕರಿಸಲು ಸಂಬಂಧಿಸಿದ ಅಧಿಕಾರಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದು. ಈ ಕುರಿತ ಮಾಧ್ಯಮಗಳ ವರದಿ ಪ್ರಕಟವಾಗುತ್ತಲೇ ಕೆಲ ಚುನಾಯಿತ ಮಹಿಳೆಯರ ಗಂಡಂದಿರು ಕಾಣೆಯಾಗಿದ್ದಾರೆ ಎನ್ನಲಾಗಿದೆ. ಇನ್ನು ಈ ಕುರಿತ ಆರೋಪಗಳ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸತ್ಯಾಸತ್ಯತೆ ಅರಿತು ಸೂಕ್ತ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ದಾಮೋಹ್ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಜಯ್ ಶ್ರೀವಾಸ್ತವ ಅವರು, ಈ ಘಟನೆಯು ನಿಯಮಗಳಿಗೆ ವಿರುದ್ಧವಾಗಿದೆ ಮತ್ತು ವಿಷಯವನ್ನು ಪರಿಶೀಲಿಸಿದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

"ತಮ್ಮ ಚುನಾಯಿತ ಪತ್ನಿಯರ ಬದಲಿಗೆ ಕೆಲವು ಪುರುಷರು ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂಬ ಮಾಹಿತಿ ನಮಗೆ ಬಂದಿತ್ತು... ಈ ವಿಷಯದ ಬಗ್ಗೆ ವಿವರವಾದ ವರದಿಯಗಾಗಿ ತನಿಖೆಗೆ ನಾವು ಆದೇಶಿಸಿದ್ದೇವೆ, ವರದಿ ಬಂದ ನಂತರ ಪಂಚಾಯತ್ ಕಾರ್ಯದರ್ಶಿ (ತಪ್ಪಿತಸ್ಥರಾಗಿದ್ದರೆ) ಶಿಕ್ಷೆಗೆ ಗುರಿಯಾಗುತ್ತಾರೆ" ಎಂದು ಅವರು ಹೇಳಿದ್ದಾರೆ.

SCROLL FOR NEXT