ದೇಶ

ಎಸ್ ಎಸ್ ಸಿ ಹಗರಣ: ಪಾರ್ಥ ಚಟರ್ಜಿ, ಅರ್ಪಿತಾ ಮುಖರ್ಜಿ 14 ದಿನ ಜೈಲುಪಾಲು

Nagaraja AB

ಕೊಲ್ಕತ್ತ: ಶಾಲಾ ಶಿಕ್ಷಕರ ಅಕ್ರಮ ನೇಮಕಾತಿ  ಹಗರಣದಲ್ಲಿ ಬಂಧಿತರಾಗಿರುವ ತೃಣಮೂಲಕ ಕಾಂಗ್ರೆಸ್ ಮುಖಂಡ ಪಾರ್ಥ ಚಟರ್ಜಿ ಮತ್ತು ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.

ಜಾರಿ ನಿರ್ದೇಶನಾಲಯ ಬಂಗಾಳದ ಮಾಜಿ ಶಿಕ್ಷಣ ಸಚಿವ ಮತ್ತು ಅರ್ಪಿತಾ ಮುಖರ್ಜಿಯನ್ನು 14 ದಿನ ಕಸ್ಟಡಿಗೆ ಕೇಳಿತ್ತು. ಪ್ರಕರಣದಲ್ಲಿ ಹೊಸ ಬೆಳವಣಿಗೆ ಕುರಿತು ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ತನಿಖಾ ಸಂಸ್ಥೆಯ ವಕೀಲರು ಹೇಳಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿಬೋನ್ ಕುಮಾರ್ ಸಾಧು ಅವರು ಪ್ರಕರಣದ ಎಲ್ಲಾ ಕಕ್ಷಿದಾರರ ವಾದ ಆಲಿಸಿದ ನಂತರ ತಮ್ಮ ಆದೇಶವನ್ನು ಕಾಯ್ದಿರಿಸಿದ್ದಾರೆ.

ಪಾರ್ಥ ಚಟರ್ಜಿ ಮತ್ತುು ಅರ್ಪಿತಾ ಮುಖರ್ಜಿ ಪಶ್ಚಿಮ ಬಂಗಾಳದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಅಕ್ರಮ ನೇಮಕಾತಿಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜುಲೈ 23 ರಂದು ಬಂಧನಕ್ಕೊಳಗಾಗಿದ್ದರು. ಪಾರ್ಥ ಚಟರ್ಜಿ ಅವರ ಒಡೆತನದ ಫ್ಲಾಟ್ ಗಳಿಂದ 49.8 ಕೋಟಿ ರೂ. ನಗದು, ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿಗಳ ದಾಖಲೆಗಳು ಮತ್ತಿಬ್ಬರು ಆರೋಪಿಗಳು ಹೊಂದಿರುವ ಕಂಪನಿಯ ಜಂಟಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಹೇಳಿಕೊಂಡಿದೆ.

ಪಾರ್ಥ ಚಟರ್ಜಿ ಅವರನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಚಿವ ಸ್ಥಾನದಿಂದ ಕಿತ್ತೆಸೆದಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಅವರು ಹೊಂದಿದ್ದ ಎಲ್ಲಾ ಹುದ್ದೆಗಳಿಂದ ತೆರವು ಮಾಡಲಾಗಿದೆ.

SCROLL FOR NEXT