ದೇಶ

ಬುಲ್ಡೋಜರ್ ಕಾರ್ಯಾಚರಣೆ ನೆಪ ಮಾತ್ರ: ಯೋಗಿ ಸರ್ಕಾರದ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ

Lingaraj Badiger

ನವದೆಹಲಿ: ನೋಯ್ಡಾದ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ಮಹಿಳೆ ಮೇಲೆ ದೌರ್ಜನ್ಯವೆಸಗಿದ ಆರೋಪ ಹೊತ್ತಿರುವ ಬಿಜೆಪಿ ಮುಖಂಡನ ಅಕ್ರಮ ಆಸ್ತಿ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ ಯೋಗಿ ಆದಿತ್ಯನಾಥ್ ಸರ್ಕಾರದ ನಡೆಯನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಶ್ನಿಸಿದ್ದಾರೆ.

“ನೋಯ್ಡಾ ಬಿಜೆಪಿ ನಾಯಕನ ಕಟ್ಟಡ ಅಕ್ರಮ ಎಂದು ಬಿಜೆಪಿ ಸರ್ಕಾರಕ್ಕೆ ಇಷ್ಟು ವರ್ಷಗಳ ಕಾಲ ತಿಳಿದಿರಲಿಲ್ಲವೇ? ಬುಲ್ಡೋಜರ್ ಕ್ರಮವು ನೆಪ ಮಾತ್ರ.” ಎಂದು ಪ್ರಿಯಾಂಕಾ ಗಾಂಧಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

ಬಹಿರಂಗವಾಗಿ ಅಸಭ್ಯವಾಗಿ ವರ್ತಿಸಿ 10-15 ಗೂಂಡಾಗಳನ್ನು ಕಳುಹಿಸಿ ಮಹಿಳೆಯರಿಗೆ ಬೆದರಿಕೆ ಹಾಕುವ ಧೈರ್ಯವನ್ನು ನೀಡುತ್ತಿರುವವರು ಯಾರು? ಆತನನ್ನು ಉಳಿಸಿಕೊಂಡು ಬಂದವರು ಯಾರು? ಅವರ ಗೂಂಡಾಗಿರಿ ಮತ್ತು ಅಕ್ರಮ ವ್ಯವಹಾರಗಳು ಯಾರ ರಕ್ಷಣೆಯಲ್ಲಿ ಬೆಳೆಯಿತು?” ಎಂದು ಪ್ರಿಯಾಂಕಾ ವಾದ್ರಾ ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ತಮ್ಮನ್ನು ಬಿಜೆಪಿಯ ಕಿಸಾನ್ ಮೋರ್ಚಾದವರು ಎಂದು ಹೇಳಿಕೊಂಡಿರುವ ಶ್ರೀಕಾಂತ್ ತ್ಯಾಗಿ ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದರ ಬೆನ್ನಲ್ಲೇ  ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ನೋಯ್ಡಾದ ಸೆಕ್ಟರ್ -93 ಬಿ ನಲ್ಲಿರುವ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿನ ಶ್ರೀಕಾಂತ್ ತ್ಯಾಗಿ ಅವರ ಆಸ್ತಿಯಲ್ಲಿನ ಅಕ್ರಮ ಕಟ್ಟಡವನ್ನು ಕೆಡವಿದರು. ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಂದಿಗೆ ತ್ಯಾಗಿಯ ಗಲಾಟೆ ಬಳಿಕ ತ್ಯಾಗಿ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ನೋಯ್ಡಾ ಪೊಲೀಸರು ತ್ಯಾಗಿ ವಿರುದ್ಧ ದರೋಡೆಕೋರ ಕಾಯ್ದೆಯನ್ನು ಪ್ರಯೋಗಿಸಿದ್ದಾರೆ.

ಕೆಲವು ದಿನಗಳ ಹಿಂದೆ ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿಯಲ್ಲಿ ತ್ಯಾಗಿ ಮತ್ತು ಮಹಿಳೆಯ ನಡುವೆ ಜಗಳ ನಡೆದಿತ್ತು. ಗ್ರ್ಯಾಂಡ್ ಓಮ್ಯಾಕ್ಸ್ ಸೊಸೈಟಿ ಪ್ರದೇಶದಲ್ಲಿ ತ್ಯಾಗಿ ಅವರು ಕೆಲವು ಸಸಿಗಳನ್ನು ನೆಡಲು ಬಯಸಿದ್ದರು. ಆದರೆ ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಿಳೆ ಅದನ್ನು ವಿರೋಧಿಸಿದರು. ಆದಾಗ್ಯೂ ತ್ಯಾಗಿ ಅವರು ಇದು ತಮ್ಮ ಹಕ್ಕು ಎಂಬಂತೆ ಸಸಿ ನೆಡಲು ಮುಂದಾಗಿದ್ದಾಗ ಮಹಿಳೆ ಮೇಲೆ ತ್ಯಾಗಿ ದೌರ್ಜನ್ಯ ನಡೆಸಿದ್ದರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು.

ತ್ಯಾಗಿ ಬಂಧನಕ್ಕೆ ಕಾರಣವಾಗುವ ಯಾವುದೇ ಮಾಹಿತಿ ನೀಡುವವರಿಗೆ 25,000 ಬಹುಮಾನವನ್ನು ಘೋಷಿಸಲಾಗಿದೆ.

SCROLL FOR NEXT