ದೇಶ

ಬರೋಬ್ಬರಿ 40 ದಿನಗಳ ನಂತರ ಏಕನಾಥ್ ಶಿಂಧೆ ಸಂಪುಟ ನಾಳೆ ವಿಸ್ತರಣೆ

Lingaraj Badiger

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬರೋಬ್ಬರಿ 40 ದಿನಗಳ ನಂತರ ಆಗಸ್ಟ್ 9 ರಂದು ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಲಿದ್ದಾರೆ ಎಂದು ಮುಖ್ಯಮಂತ್ರಿಯ ಆಪ್ತರು ಸೋಮವಾರ ತಿಳಿಸಿದ್ದಾರೆ.

ಜೂನ್ 30 ರಂದು ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಹಾಗೂ ಉಪಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅವರು ಅವರು ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಸಿಎಂ, ಡಿಸಿಎಂ ಇಬ್ಬರೇ ಸರ್ಕಾರ ನಡೆಸುತ್ತಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆಗೆ ರಾಜಭವನದಲ್ಲಿ ಸಚಿವ ಸಂಪುಟ ವಿಸ್ತರಣೆ ಸಮಾರಂಭ ನಡೆಯಲಿದ್ದು, ಒಂದು ಡಜನ್ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಶಿಂಧೆ ಅವರ ಆಪ್ತರು ಪಿಟಿಐಗೆ ತಿಳಿಸಿದ್ದಾರೆ. ನಂತರ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

"ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನವನ್ನು ಆದಷ್ಟು ಬೇಗ ನಡೆಸಬೇಕಾಗಿದೆ. ಆದ್ದರಿಂದ ನಾವು ಸಚಿವ ಸಂಪುಟ ವಿಸ್ತರಣೆ ಮಾಡಿ, 12 ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲು ನಿರ್ಧರಿಸಿದ್ದೇವೆ. ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವವರಲ್ಲಿ ಕೆಲವರು ವಿಧಾನ ಪರಿಷತ್ ಸದ್ಯರಾಗಿದ್ದಾರೆ" ಎಂದು ಆಪ್ತರು ತಿಳಿಸಿದ್ದಾರೆ.

ಶಿವಸೇನೆಯ ಬಹುಪಾಲು ಶಾಸಕರನ್ನು ತನ್ನೊಂದಿಗೆ ಕರೆದೊಯ್ಯುವಲ್ಲಿ ಯಶಸ್ವಿಯಾದ ನಂತರ ಅಚ್ಚರಿಯ ರೀತಿಯಲ್ಲಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ ಶಿಂಧೆ, ಅವರೆಲ್ಲರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವುದು ಕಷ್ಟಕರವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ಒಂದು ತಿಂಗಳಲ್ಲಿ ಶಿಂಧೆ ಅವರು ನವದೆಹಲಿಗೆ ಏಳು ಬಾರಿ ಭೇಟಿ ನೀಡಿದ್ದು, ಪ್ರತಿ ಭೇಟಿಯಲ್ಲೂ ಸಚಿವ ಸಂಪುಟ ವಿಸ್ತರಣೆಯಾಗುತ್ತದೆ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಅಂತಿಮವಾಗಿ ನಾಳೆ ಸಂಪುಟ ವಿಸ್ತರಣೆಯಾಗುತ್ತಿದೆ.

SCROLL FOR NEXT