ದೇಶ

ಆಮ್ ಆದ್ಮಿ ಪಕ್ಷವನ್ನು ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸಲು ಇನ್ನೊಂದು ಹೆಜ್ಜೆ ದೂರವಿದೆ: ಅರವಿಂದ ಕೇಜ್ರಿವಾಲ್

Ramyashree GN

ನವದೆಹಲಿ: ಆಮ್ ಆದ್ಮಿ ಪಕ್ಷವನ್ನು (ಎಎಪಿ) ರಾಷ್ಟ್ರೀಯ ಪಕ್ಷವೆಂದು ಘೋಷಿಸಲು ಒಂದು ಹೆಜ್ಜೆ ದೂರವಿದೆ ಎಂದು ಒತ್ತಿ ಹೇಳಿದ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗವು ಎಎಪಿಯನ್ನು ಗೋವಾದಲ್ಲಿ ರಾಜ್ಯ ಪಕ್ಷ ಎಂದು ಗುರುತಿಸಿದ ಬಳಿಕ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ.

'ದೆಹಲಿ ಮತ್ತು ಪಂಜಾಬ್ ನಂತರ, ಎಎಪಿ ಈಗ ಗೋವಾದಲ್ಲಿ ರಾಜ್ಯದ ಮಾನ್ಯತೆ ಪಡೆದ ಪಕ್ಷವಾಗಿದೆ. ನಾವು ಇನ್ನೂಂದು ರಾಜ್ಯದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಂಡರೆ, ಅಧಿಕೃತವಾಗಿ 'ರಾಷ್ಟ್ರೀಯ ಪಕ್ಷ' ಎಂದು ಘೋಷಿಸಲಾಗುವುದು. ತಮ್ಮ ಕಠಿಣ ಪರಿಶ್ರಮಕ್ಕಾಗಿ ಪ್ರತಿಯೊಬ್ಬ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ. ಎಎಪಿ ಮತ್ತು ಅದರ ಸಿದ್ಧಾಂತದಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ನಾನು ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ' ಎಂದು ಕೇಜ್ರಿವಾಲ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷವಾಗಿ ಸ್ಥಾನಮಾನ ಪಡೆಯಬೇಕೆಂದರೆ, ದೇಶದ ಯಾವುದೇ ರಾಜಕೀಯ ಪಕ್ಷವು ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಲೋಕಸಭೆಯಲ್ಲಿ ಶೇ 2 ರಷ್ಟು ಸ್ಥಾನಗಳನ್ನು ಗೆಲ್ಲಬೇಕು. ಲೋಕಸಭೆ ಅಥವಾ ವಿಧಾನಸಭೆಗೆ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವು ಯಾವುದೇ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಶೇ 6 ರಷ್ಟು ಮತಗಳನ್ನು ಪಡೆಯಬೇಕಿರುತ್ತದೆ ಅಥವಾ ಹೆಚ್ಚುವರಿಯಾಗಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ.

ಜನಲೋಕಪಾಲ್ ಚಳುವಳಿಯ ನಂತರ 2012 ರಲ್ಲಿ ಸ್ಥಾಪನೆಯಾದ ಆಮ್ ಆದ್ಮಿ ಪಕ್ಷವು 2013ರಲ್ಲಿ ನಡೆದ ದೆಹಲಿ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರವನ್ನು ರಚಿಸಿತು. ಕಾಂಗ್ರೆಸ್ ಬೆಂಬಲವಿಲ್ಲದೆ, ಭ್ರಷ್ಟಾಚಾರ ವಿರೋಧಿ ಜನಲೋಕಪಾಲ್ ಮಸೂದೆಯನ್ನು ಅಂಗೀಕರಿಸುವಲ್ಲಿ ವಿಫಲವಾದ ನಂತರ ಸರ್ಕಾರ 49 ದಿನಗಳಲ್ಲಿ ರಾಜೀನಾಮೆ ನೀಡಿತು.

ಅದಾದ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. 2015ರ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವಿನೊಂದಿಗೆ ಎಎಪಿ ಮತ್ತೆ ಅಧಿಕಾರಕ್ಕೆ ಮರಳಿತು. ಇದರೊಂದಿಗೆ 2020 ರ ಚುನಾವಣೆಯಲ್ಲಿ ಪಕ್ಷ ಎರಡನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿತು.

ಎಎಪಿ ಈಗ ಪಂಜಾಬ್‌ನಲ್ಲಿಯೂ ಸರ್ಕಾರವನ್ನು ಹೊಂದಿದೆ. ಅಲ್ಲಿನ ಅಕಾಲಿದಳ ಮತ್ತು ಕಾಂಗ್ರೆಸ್‌ನ ಸಾಂಪ್ರದಾಯಿಕ ಶಕ್ತಿಗಳನ್ನು ಸೋಲಿಸಿತು. ಪಕ್ಷವು ಇದೀಗ ತನ್ನ ರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದು, ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗಳ ಮೇಲೂ ಕಣ್ಣಿಟ್ಟಿದೆ.

SCROLL FOR NEXT