ದೇಶ

ಮಹಾರಾಷ್ಟ್ರ: ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಸ್ಥಾನ- ಫಡ್ನವೀಸ್ 

Nagaraja AB

ಮುಂಬೈ/ ಪುಣೆ: ಮಹಾರಾಷ್ಟ್ರದ ವಿಸ್ತರಿತ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾಧ್ಯಾನತೆ ನೀಡದಿರುವುದಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವಂತೆಯೇ, ಮುಂದಿನ ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ಮಹಿಳಾ ಶಾಸಕರಿಗೆ ಖಂಡಿತವಾಗಿ ಸ್ಥಾನ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ವಿಸ್ತರಣೆಯೊಂದಿಗೆ ಶಿಂಧೆ ನೇತೃತ್ವದ ಸಂಪುಟದಲ್ಲಿನ ಸಚಿವರ ಸ್ಥಾನ 20ಕ್ಕೆ ಏರಿಕೆಯಾಗಿದೆ. 

ಟೀಕೆಗಳ ಕುರಿತು ಮುಂಬೈನಲ್ಲಿ ಪ್ರತಿಕ್ರಿಯಿಸಿದ ಫಡ್ನವೀಸ್, ಖಂಡಿತವಾಗಿಯೂ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗುವುದು, ಹಿಂದೆ ಸಂಪುಟ ವಿಸ್ತರಣೆ ವಿಳಂಬವಾಗಿದ್ದಕ್ಕೆ ಟೀಕಿಸುತ್ತಿದ್ದ ಜನರು, ಇದೀಗ ಹೊಸ ವಿಚಾರದೊಂದಿಗೆ ಟೀಕಿಸುತ್ತಿದ್ದಾರೆ ಎಂದರು. 

2019 ನವೆಂಬರ್ ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಸಂದರ್ಭದಲ್ಲಿ ಒಬ್ಬ ಮಹಿಳೆ ಕೂಡಾ ಇರಲಿಲ್ಲ. ಆ ಸರ್ಕಾರವನ್ನು ಯಾರು ಕೂಡಾ ಟೀಕಿಸಿರಲಿಲ್ಲ ಎಂದು ಅವರು ಹೇಳಿದರು. ಕಾಂಗ್ರೆಸ್, ಎನ್ ಸಿಪಿಯ ಬೆಂಬಲದೊಂದಿಗೆ ಐವರು ಸಚಿವರೊಂದಿಗೆ 2019 ನವೆಂಬರ್ ನಲ್ಲಿ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ನಂತರ ಮಹಿಳೆಯರಿಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. 

ಭ್ರಷ್ಟಾಚಾರ ಆರೋಪವಿರುವ ಕೆಲವರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಲಾಗಿದೆ ಎಂಬ ಎನ್ ಸಿಪಿ ಆರೋಪದ ವಿರುದ್ಧ ವಾಗ್ದಾಳಿ ನಡೆಸಿದ ಫಡ್ನವೀಸ್, ಮಹಾ ವಿಕಾಸ್ ಆಘಾಡಿ ಸರ್ಕಾರದ ಅವಧಿಯಲ್ಲಿ ಅವರ ಪಕ್ಷದ ಇಬ್ಬರು ಸಚಿವರು ಭ್ರಷ್ಟಾಚಾರ ಆರೋಪದ ಮೇರೆಗೆ ಜೈಲಿನಲ್ಲಿದ್ದಾಗ ನಮ್ಮ ಸಚಿವರ ಬಗ್ಗೆ ಅವರಿಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.

SCROLL FOR NEXT