ದೇಶ

ನಮ್ಮ ಸರ್ಕಾರ 20 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿದೆ: ಬಿಹಾರ ಸಿಎಂ ನಿತೀಶ್ ಕುಮಾರ್

Lingaraj Badiger

ಪಾಟ್ನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ನೀಡಿದ 10 ಲಕ್ಷ ಉದ್ಯೋಗ ನೀಡುವ ಭರವಸೆಯನ್ನು ಈಡೇರಿಸಲು ನಮ್ಮ ಹೊಸ ಸರ್ಕಾರ ಬದ್ಧವಾಗಿದೆ. ಅಲ್ಲದೆ ಈ ಉದ್ಯೋಗ ಸೃಷ್ಟಿ ಗುರಿಯನ್ನು ಎರಡು ಪಟ್ಟು ಹೆಚ್ಚಿಸುವ ಗುರಿ ಹೊಂದಿದೆ ಎಂದು ಸೋಮವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.

ಇಂದು 75ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ನಿತೀಶ್ ಕುಮಾರ್ ಅವರು, "ಐತಿಹಾಸಿಕ ದಿನದಂದು ಮಾಡಲಾದ ಐತಿಹಾಸಿಕ ಘೋಷಣೆ" ಯನ್ನು ಶ್ಲಾಘಿಸಿದರು. "ನಾವು ಒಟ್ಟಿಗೆ ಇದ್ದೇವೆ ಮತ್ತು ನಾವು 10 ಲಕ್ಷ ಅಲ್ಲ 20 ಲಕ್ಷ ಉದ್ಯೋಗ ನೀಡುವ ಗುರಿ ಹೊಂದಿದ್ದೇವೆ ಎಂದು ತೇಜಸ್ವಿ ಯಾದವ್ ಕಡೆಗೆ ತಿರುಗಿ ಹೇಳಿದರು.

ನಾವು 20 ಲಕ್ಷ ಉದ್ಯೋಗಗಳ ಗುರಿಯನ್ನು ಹೊಂದಿದ್ದೇವೆ. ಸರ್ಕಾರಿ ಮತ್ತು ಖಾಸಗಿ ವಲಯಗಳ ಮೂಲಕ ಈ ಗುರಿಯನ್ನು ಸಾಧಿಸಲು ನಾವು ಪ್ರಯತ್ನ ಮಾಡುತ್ತೇವೆ ಎಂದು ಬಿಹಾರ ಸಿಎಂ ಭರವಸೆ ನೀಡಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ‘ಐತಿಹಾಸಿಕ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತೆಗೆದುಕೊಂಡ ಐತಿಹಾಸಿಕ ನಿರ್ಧಾರವಿದು. ಉದ್ಯೋಗ ಸೃಷ್ಟಿಗಿಂತ ದೊಡ್ಡ ಸಮಸ್ಯೆ ಇಂದು ಇರಲಾರದು. ನನ್ನ ಭರವಸೆ ಏನಾಯಿತು ಎಂದು ಪ್ರಶ್ನಿಸುವವರಿಗೆ ಈ ಮೂಲಕ ಉತ್ತರ ನೀಡಲಾಗಿದೆ ” ಎಂದರು. ಆರ್‌ಜೆಡಿ ನಾಯಕ 2020 ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ 10 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದ್ದರು.

SCROLL FOR NEXT