ದೇಶ

ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಸೇನೆಗೆ ಯುಎವಿ ಸೇರಿ ಹಲವು ಆಧುನಿಕ ಶಸ್ತ್ರಾಸ್ತ್ರಗಳ ಹಸ್ತಾಂತರಿಸಿದ ರಾಜನಾಥ್ ಸಿಂಗ್ 

Srinivas Rao BV

ನವದೆಹಲಿ: ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲುರಕ್ಷಣಾ ಸಚಿವ ರಾಜನಾಥ್ ಸಿಂಗ್, ಆ.16 ರಂದು ಸೇನೆಗೆ ಪ್ರಮುಖ ಆಧುನಿಕ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ್ದಾರೆ.

ಮಾನವರಹಿತ ವೈಮಾನಿಕ ವ್ಯವಸ್ಥೆ, ಕ್ಷಿಪ್ರ ಪ್ರತಿಕ್ರಿಯೆ ಹೋರಾಟದ ವಾಹನಗಳು, ಗಸ್ತು ಬೋಟ್, F-INSAS ವ್ಯವಸ್ಥೆ, ನಿಪುಣ್‌-ಲ್ಯಾಂಡ್ ಮೈನ್ಸ್,  ಎಲ್‌ಸಿಎ ಸೇನೆಯ ಭತ್ತಳಿಕೆಗಳನ್ನು ಸೇರಿರುವ ಹೊಸ ಶಸ್ತ್ರಾಸ್ತ್ರಗಳಾಗಿವೆ.

Future Infantry Soldier As A System (F-INSAS) ನ ಭಾಗವಾಗಿ ಯೋಧರು ರಷ್ಯ ನಿರ್ಮಿತ, ಎಕೆ-203 ಅಸಾಲ್ಟ್ ರೈಫಲ್ ಗಳನ್ನು ಪಡೆಯಲಿದ್ದಾರೆ. 300 ಮೀಟರ್‌ ದೂರದಲ್ಲಿರುವ ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಹೊಂದಿರುವ ರೈಫಲ್‌ ನ್ನು ರಷ್ಯಾ-ಭಾರತ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಉತ್ತರ ಪ್ರದೇಶದ ಅಮೇಠಿಯಲ್ಲಿ ತಯಾರಾಗಲಿದೆ.

F-INSAS ನ ಭಾಗವಾಗಿ ಸಿಬ್ಬಂದಿಗಳನ್ನು ಸುರಕ್ಷಿತವಾಗಿರಿಸುವ ಸಾಗಣೆ ವಾಹನಗಳು, ಸ್ವಯಂಚಾಲಿತ ಸಂವಹನ ವ್ಯವಸ್ಥೆ, ಬ್ಯಾಲಿಸ್ಟಿಕ್‌ ಹೆಲ್ಮೆಟ್‌, ಬ್ಯಾಲಿಸ್ಟಿಕ್‌ ಕನ್ನಡಕ, ಬುಲೆಟ್‌ ಪ್ರೂಫ್‌ ಜಾಕೆಟ್‌, ಥರ್ಮಲ್ ಇಮೇಜರ್ ಗಳು, ಟ್ಯಾಂಕ್ ಗಳಿಗೆ ಅತ್ಯಾಧುನಿಕ  ದೃಶ್ಯ ವ್ಯವಸ್ಥೆ, ಲ್ಯಾಂಡಿಂಗ್ ಕ್ರಾಫ್ಟ್ ಅಸಾಲ್ಟ್ (LCA) ಸ್ವದೇಶಿ ನಿರ್ಮಿತ ದೋಣಿಗಳನ್ನು ನೀಡಲಾಗಿದೆ.

ಉಗ್ರ ನಿಗ್ರಹಕ್ಕೆ ಭಾರತೀಯ ಸೇನೆ ಪುಣೆಯ ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ ಸಹಯೋಗದಲ್ಲಿ ನಿಪುಣ್‌ ಸ್ಫೋಟಕವನ್ನು ತಯಾರಿಸಿದ್ದು, ನಿಪುಣ್‌ ಮೇಲೆ ಕಾಲಿಟ್ಟಾಗ ಅದು ಸ್ಫೋಟಗೊಳ್ಳುವಂತೆ ವಿನ್ಯಾಸ ಮಾಡಲಾಗಿದೆ.

ಚೀನಾ ಗಡಿ ಭಾಗದಲ್ಲಿ ಎಲ್‌ಸಿಎ ನಿಯೋಜನೆಗೊಳ್ಳಲಿದ್ದು, ಲಡಾಖ್ ಬಳಿ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ಶಸ್ತ್ರಾಸ್ತ್ರಗಳು ಸಹಕಾರಿಯಾಗಿವೆ.

SCROLL FOR NEXT