ದೇಶ

ನಿಜವಾದ ಸಿಎಂ ಯಾರೆಂದು ಎಲ್ಲರಿಗೂ ಗೊತ್ತಿದೆ: ಏಕನಾಥ್ ಶಿಂಧೆಗೆ ಆದಿತ್ಯ ಠಾಕ್ರೆ ಟಾಂಗ್

Lingaraj Badiger

ಮುಂಬೈ: ಮಹಾರಾಷ್ಟ್ರದ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಅವರು, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವರ್ಚಸ್ಸನ್ನು ಉಲ್ಲೇಖಿಸುವ ಮೂಲಕ "ನಿಜವಾದ ಮುಖ್ಯಮಂತ್ರಿ" ಯಾರು ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಬುಧವಾರ ಹೇಳಿದ್ದಾರೆ. 

"ನಿಜವಾದ ಮುಖ್ಯಮಂತ್ರಿ ಯಾರೆಂದು ಈಗ ಎಲ್ಲರಿಗೂ ತಿಳಿದಿದೆ" ಎಂದು ಗೃಹ, ಹಣಕಾಸು ಮತ್ತು ಇತರ ಪ್ರಮುಖ ಖಾತೆಗಳನ್ನು ಹೊಂದಿರುವ ಫಡ್ನವಿಸ್ ಅವರೇ ನಿಜವಾದ ಸಿಎಂ ಎಂದು ಆದಿತ್ಯ ಠಾಕ್ರೆ ಏಕನಾಥ್ ಶಿಂಧೆಗೆ ಟಾಂಗ್ ನೀಡಿದ್ದಾರೆ.

ಸಂಪುಟ ವಿಸ್ತರಣೆಯ ಬಗ್ಗೆ ಕಿಡಿಕಾರಿರುವ ಆದಿತ್ಯ ಠಾಕ್ರೆ, ಸಂಪುಟದಲ್ಲಿ ಮುಂಬೈನ ಧ್ವನಿಯಾಗಲೀ ಅಥವಾ ಮಹಿಳಾ, ಪಕ್ಷೇತರ ಶಾಸಕರ ಧ್ವನಿ ಕೇಳಲ್ಲೇ ಇಲ್ಲ ಎಂದಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಕಳೆದ ವಾರ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸಿದರು. ಬಂಡಾಯ ಶಿವಸೇನೆ ಪಾಳೆಯದಿಂದ ಮತ್ತು ಬಿಜೆಪಿಯಿಂದ ತಲಾ ಒಂಬತ್ತು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಯಾವುದೇ ಮಹಿಳಾ ಶಾಸಕರಿಗೆ ಅಥವಾ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿಲ್ಲ.

ಜೂನ್‌ನಲ್ಲಿ ಶಿವಸೇನೆ ನಾಯಕತ್ವದ ವಿರುದ್ಧ ಶಿಂಧೆ ಬಂಡಾಯವೆದ್ದಾಗ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡ ಮೊದಲ 14 ರಿಂದ 15 ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ.

ಹಾಗಾಗಿ ನಿಷ್ಠೆಗೆ ಸ್ಥಾನವಿಲ್ಲ ಎಂದು ಮಾಜಿ ಸಚಿವ ಆದಿತ್ಯ ಠಾಕ್ರೆ ಅವರು ರಾಜ್ಯ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಲೇವಡಿ ಮಾಡಿದ್ದಾರೆ.

SCROLL FOR NEXT