ದೇಶ

ಡೋಲೋ 650 ಎಂಜಿ ಟ್ಯಾಬ್ಲೆಟ್ ಸೂಚಿಸಲು 1000 ಕೋಟಿ ರೂ. ಮೊತ್ತದ ಫ್ರೀಬಿಸ್; ಸುಪ್ರೀಂ ಕೋರ್ಟ್ ಗೆ ಮಾಹಿತಿ

Srinivas Rao BV

ನವದೆಹಲಿ: ಡೋಲೋ 650 ಎಂಜಿ ಟ್ಯಾಬ್ಲೆಟ್ ಗಳನ್ನು ರೋಗಿಗಳಿಗೆ ಸೂಚಿಸಲು ವೈದ್ಯರಿಗೆ ಔಷಧ ತಯಾರಿಕಾ ಸಂಸ್ಥೆ 1000 ಕೋಟಿ ರೂಪಾಯಿ ಮೌಲ್ಯದ ಫ್ರೀಬಿಸ್ (ಉಚಿತ ಕೊಡುಗೆ) ಗಳನ್ನು ನೀಡಿತ್ತು ಎಂದು ಸಿಬಿಡಿಟಿ ಆರೋಪಿಸಿತ್ತು ಎಂದು ಸುಪ್ರೀಂ ಕೋರ್ಟ್ ಗೆ ಎನ್ ಜಿಒ ಮಾಹಿತಿ ನೀಡಿದೆ.
 
ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪರ ವಾದ ಮಂಡಿಸಿರುವ ಅಡ್ವೊಕೇಟ್ ಸಂಜಯ್ ಪರೀಖ್ ಹಾಗೂ ಅಡ್ವೊಕೇಟ್ ಅರ್ಪಣಾ ಭಟ್, 500ಎಂಜಿ ವರೆಗಿನ ಮಾತ್ರೆಗಳಿಗ ಬೆಲೆಯನ್ನು ಸರ್ಕಾರದ ವ್ಯವಸ್ಥೆಯಲ್ಲಿ ನಿಯಂತ್ರಣ ಮಾಡಲಾಗುತ್ತದೆ, ಹಾಗೂ 500ಎಂಜಿ ಗಿಂತಲೂ ಹೆಚ್ಚಿನ ಮಾತ್ರೆಗಳನ್ನು ಫಾರ್ಮಾ ಕಂಪನಿಯ ಉತ್ಪಾದಕರು ನಿಗದಿಪಡಿಸಬಹುದು ಎಂದು ನ್ಯಾ.ಡಿ ವೈ ಚಂದ್ರಚೂಡ್ ಹಾಗೂ ಎಎಸ್ ಬೋಪಣ್ಣ ಅವರಿದ್ದ ಪೀಠಕ್ಕೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಹೆಚ್ಚಿನ ಲಾಭಕ್ಕಾಗಿ ಸಂಸ್ಥೆಗಳು ಡೋಲೋ ಮಾತ್ರೆಯ 650 ಎಂಜಿ ಸಾಮರ್ಥ್ಯದ ಡೋಸ್ ಗಳನ್ನೇ ರೋಗಿಗಳಿಗೆ ಪಡೆಯಲು ಸಲಹೆ ನೀಡುವುದಕ್ಕಾಗಿ ಹಲವು ವೈದ್ಯರಿಗೆ ಸಂಸ್ಥೆ ಉಚಿತ ಕೊಡುಗೆಗಳನ್ನು (ಫ್ರೀಬೀಸ್) ಗಳನ್ನು ನೀಡಿದೆ. ಇದು ತರ್ಕಬದ್ಧವಲ್ಲದ ಡೋಸ್ ಸಂಯೋಜನೆಯಾಗಿದ್ದು, ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿದ ಬಳಿಕ ಇಂತಹ ಮತ್ತಷ್ಟು ವಿಷಯಗಳನ್ನು ಕೋರ್ಟ್ ಎದುರು ಬಹಿರಂಗಪಡಿಸುವುದಾಗಿ ಪರೀಖ್ ಹೇಳಿದ್ದಾರೆ.

"ನೀವು ಈ ಮಾಹಿತಿಗಳನ್ನು ಬಹಿರಂಗಪಡಿಸುತ್ತಿರುವುದು ಒಳ್ಳೆಯದಾಗಿದೆ, ನನಗೆ ಇತ್ತೀಚೆಗೆ ಕೋವಿಡ್ ಬಂದಾಗಲೂ ನಾನು ಇದೇ ಮಾತ್ರೆಯನ್ನು ಸೇವಿಸಿದ್ದೆ. ಇದು ಗಂಭೀರ ವಿಷಯವಾಗಿದ್ದು, ಇದರತ್ತ ಗಮನ ಹರಿಸುತ್ತೇವೆ" ಎಂದು ನ್ಯಾಯಾಧೀಶರು ಹೇಳಿದ್ದಾರೆ.

SCROLL FOR NEXT