ದೇಶ

ಉತ್ತರ ಪ್ರದೇಶ: ಶುಲ್ಕ ಪಾವತಿಸದ ಕಾರಣಕ್ಕೆ ಶಿಕ್ಷಕನಿಂದ ಥಳಿತಕ್ಕೊಳಗಾಗಿದ್ದ ಬಾಲಕ ಸಾವು

Lingaraj Badiger

ಲಖನೌ: ರಾಜಸ್ಥಾನದ ಜಲೌರ್‌ನಲ್ಲಿ ನಡೆದ ಘಟನೆಯಂತೆಯೇ ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯಲ್ಲಿ ಶುಲ್ಕ ಪಾವತಿಸದ ಕಾರಣ ಶಿಕ್ಷಕರೊಬ್ಬರು 3ನೇ ತರಗತಿಯ ವಿದ್ಯಾರ್ಥಿಯ ಮೇಲೆ ಕ್ರೌರ್ಯ ಮೆರೆದಿದ್ದು, ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಶಿಕ್ಷಕನಿಂದ ಥಳಿತಕ್ಕೊಳಗಾಗಿದ್ದ ವಿದ್ಯಾರ್ಥಿ 8 ದಿನಗಳ ನಂತರ ಬುಧವಾರ ಬಹ್ರೈಚ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಪೊಲೀಸ್ ಮೂಲಗಳ ಪ್ರಕಾರ, ಆಗಸ್ಟ್ 8 ರಂದು ಶ್ರಾವಸ್ತಿಯ ಸಿರ್ಸಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಬ್ರಾಹ್ಮಣ ಉಚ್ಚತ್ತಮ್ ಮಾಧ್ಯಮಿಕ್ ಸ್ಕೂಲ್ ಚೌಲಾಹಿಯಲ್ಲಿ ಈ ಘಟನೆ ನಡೆದಿದೆ.

13 ವರ್ಷದ ಮೃತ ಬಾಲಕ ಬ್ರಿಜೇಶ್ ವಿಶ್ವಕರ್ಮ ಅವರ ಚಿಕ್ಕಪ್ಪ ಸಲ್ಲಿಸಿದ ದೂರಿನ ಆಧಾರದ ಮೇಲೆ ಐಪಿಸಿ ವಿವಿಧಸೆಕ್ಷನ್‌ಗಳ ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಶ್ರಾವಸ್ತಿ ಪೊಲೀಸ್ ಅಧಿಕಾರಿಗಳು ಘಟನೆಯನ್ನು ದೃಢಪಡಿಸಿದ್ದಾರೆ.

ಶ್ರಾವಸ್ತಿಯ ಪೊಲೀಸ್ ಅಧೀಕ್ಷಕ (ಎಸ್‌ಪಿ) ಅರವಿಂದ್ ಕೆ ಮೌರ್ಯ ಮಾತನಾಡಿ, “3 ನೇ ತರಗತಿಯಲ್ಲಿ ಓದುತ್ತಿದ್ದ 13 ವರ್ಷದ ವಿದ್ಯಾರ್ಥಿ ಆಗಸ್ಟ್ 17 ರಂದು ಬಹ್ರೈಚ್‌ನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಆಗಸ್ಟ್ 8 ರಂದು ತನ್ನ ಶಾಲಾ ಶಿಕ್ಷಕನಿಂದ ಥಳಿಸಲ್ಪಟ್ಟಿದ್ದಾನೆ ಎಂದು ಆತನ ಚಿಕ್ಕಪ್ಪ ದೂರಿದ್ದಾರೆ. ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಮುಂದಿನ ತನಿಖೆಯನ್ನು ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಶಾಲಾ ಶುಲ್ಕ ಕಟ್ಟದ ಕಾರಣ ಶಿಕ್ಷಕ ಬಾಲಕನಿಗೆ ಮನಬಂದಂತೆ ಥಳಿಸಿದ್ದಾರೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದಾರೆ.

SCROLL FOR NEXT