ದೇಶ

ಅಸ್ಸಾಂ: ಬಾಂಗ್ಲಾ ಉಗ್ರರಿಗೆ ಆಶ್ರಯ ನೀಡಿದ್ದ ಮದರಸಾ ಧ್ವಂಸ

Srinivasamurthy VN

ಗುವಾಹತಿ: ಬಾಂಗ್ಲಾ ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಮದರಸಾವನ್ನು ಅಸ್ಸಾಂ ಸರ್ಕಾರ ನೆಲಸಮಗೊಳಿಸಿದೆ.

ನಾಲ್ಕು ವರ್ಷಗಳಿಂದ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಇಬ್ಬರು ಬಾಂಗ್ಲಾದೇಶಿ ಉಗ್ರರಿಗೆ ಆಶ್ರಯ ನೀಡಿದ್ದ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಮದರಸಾವನ್ನು ಜಿಲ್ಲಾಡಳಿತ ಸೋಮವಾರ ನೆಲಸಮಗೊಳಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಡಿ ಸುಮನ್ ಅಲಿಯಾಸ್ ಸೈಫುಲ್ ಇಸ್ಲಾಂ ಎಂದು ಗುರುತಿಸಲಾದ ಭಯೋತ್ಪಾದಕನನ್ನು ಈ ವರ್ಷದ ಆರಂಭದಲ್ಲಿ ಬಂಧಿಸಲಾಗಿದ್ದು, ಮತ್ತೊಬ್ಬನನ್ನು ಹಿಡಿಯಲು ತೀವ್ರ ಹುಡುಕಾಟ ನಡೆಯುತ್ತಿದೆ. ಇಬ್ಬರು ಭಯೋತ್ಪಾದಕರಿಗೆ ಅವರ ಅಕ್ರಮ ಚಟುವಟಿಕೆಗಳಲ್ಲಿ ಸಹಾಯ ಮಾಡಿದ ಮದರಸಾ ಪ್ರಾಂಶುಪಾಲರು, ಶಿಕ್ಷಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಈ ಹಿಂದೆ ಬಂಧಿಸಲಾಗಿತ್ತು. ಇದೀಗ ಉಗ್ರರಿಗೆ ಆಶ್ರಯ ನೀಡಿದ್ದ ಮದರಸಾವನ್ನು ಜಿಲ್ಲಾಡಳಿತ ನೆಲಸಮಗೊಳಿಸಿದೆ.

ಈ ಕುರಿತು ಮಾತನಾಡಿರುವ  ಬಾರ್ಪೇಟಾ ಪೊಲೀಸ್ ವರಿಷ್ಠಾಧಿಕಾರಿ ಅಮಿತವ ಸಿನ್ಹಾ ಅವರು, 'ಈ ಮದರಸಾವನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿರುವುದರಿಂದ, ಇಂದು ಬಾರ್ಪೇಟಾ ಜಿಲ್ಲಾಡಳಿತ ನಡೆಸಿದ ತೆರವು ಕಾರ್ಯಾಚರಣೆಯಲ್ಲಿ ಇದನ್ನು ನೆಲಸಮ ಮಾಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ಎಂಡಿ ಸುಮನ್ ಬಂಧನದ ನಂತರ ಬರ್ಪೇಟಾದ ಧಕಲಿಯಾಪಾರದಲ್ಲಿ ಮದರಸಾದ ಅಧ್ಯಾಪಕರಾದ 'ಶೈಖುಲ್ ಹಿಂದ್ ಮದ್ಮುದಲ್ ಹಸನ್ ಜಮೀಯುಲ್ ಹುದಾ ಇಸ್ಲಾಮಿಕ್ ಅಕಾಡೆಮಿ' ದೇಶವಿರೋಧಿ ಅಂಶಗಳೊಂದಿಗೆ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು ಎಂದು ಸಿನ್ಹಾ ಹೇಳಿದರು.

ಮದರಸಾದ ಪ್ರಾಂಶುಪಾಲ ಮಮುದುಲ್ ರಶೀದ್, ಮತ್ತೊಬ್ಬ ಶಿಕ್ಷಕ ಅಕ್ಬರ್ ಅಲಿ ಮತ್ತು ಅವರ ಸಹೋದರ ಅಬುಲ್ ಕಲಾಂ ಆಜಾದ್ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಎಬಿಟಿ ಉಗ್ರರು ಸುಮಾರು ನಾಲ್ಕು ವರ್ಷಗಳಿಂದ ಮದರಸಾದಲ್ಲಿ ತಂಗಿದ್ದರು. ಈ ವರ್ಷದ ಮಾರ್ಚ್‌ನಿಂದ ಪೊಲೀಸರು 40 ಕ್ಕೂ ಹೆಚ್ಚು ಜನರನ್ನು ಉಗ್ರ ಕೃತ್ಯಗಳಿಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ. ಕೇಂದ್ರ ಮತ್ತು ಕೆಳ ಅಸ್ಸಾಂನಲ್ಲಿ ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಕಟ್ಟುನಿಟ್ಟಾದ ಭದ್ರತೆ ನಿರ್ವಹಿಸುತ್ತಿದ್ದಾರೆ ಎಂದೂ ಹೇಳಿದರು.
 

SCROLL FOR NEXT