ದೇಶ

ಕಾಂಗ್ರೆಸ್‌ಗೆ ಮತ್ತೆ ಸಂಕಷ್ಟ: ಗುಲಾಂ ನಬಿ ಆಜಾದ್ ಬೆಂಬಲಿಸಿ 50 ಜಮ್ಮು ಮತ್ತು ಕಾಶ್ಮೀರ ನಾಯಕರು ಪಕ್ಷ ಗುಡ್ ಬೈ

Ramyashree GN

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ 50ಕ್ಕೂ ಹೆಚ್ಚು ಕಾಂಗ್ರೆಸ್ ಹಿರಿಯ ನಾಯಕರು ಮಂಗಳವಾರ ಇಲ್ಲಿ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಎಲ್ಲಾ ನಾಯಕರು ಜಂಟಿ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದ್ದಾರೆ.

ಚಾಂದ್ ಮತ್ತು ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘಾರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ತಮ್ಮ ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
ಆಜಾದ್ ಅವರನ್ನು ಬೆಂಬಲಿಸಿ ನಾವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಂಟಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇವೆ ಎಂದು ಬಲ್ವಾನ್ ಸಿಂಗ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ 73 ವರ್ಷದ ಗುಲಾಂ ನಬಿ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಒಡನಾಟವನ್ನು ಕೊನೆಗೊಳಿಸಿದರು. ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರವಾನಿಸಿದ ರಾಜೀನಾಮೆ ಪತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಆಜಾದ್, ‘ಕಳೆದ ಎಂಟು ವರ್ಷಗಳಲ್ಲಿ ಕಾಂಗ್ರೆಸ್‌ ನಾಯಕತ್ವದ ಚುಕ್ಕಾಣಿಯನ್ನು ಗಂಭೀರವಲ್ಲದ ವ್ಯಕ್ತಿಯೊಬ್ಬರ ಕೈಗೆ ನೀಡಲು ಯತ್ನಗಳು ನಡೆದವು. ಪಕ್ಷಕ್ಕೊಸ್ಕರ ಜೀವನವನ್ನೇ ಮುಡಿಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸಲಾಯಿತು. ಕಾಂಗ್ರೆಸ್‌ನ ಇಂದಿನ ಪರಿಸ್ಥಿತಿಗೆ ಇದೆಲ್ಲವೂ ಕಾರಣ’ ಎಂದು ವಾಗ್ದಾಳಿ ನಡೆಸಿದ್ದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ವೇಳೆಗೆ ಹೊಸ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು, ನೂರಾರು ಪಂಚಾಯತ್ ರಾಜ್ ಸಂಸ್ಥೆಯ (ಪಿಆರ್‌ಐ) ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಈಗಾಗಲೇ ಆಜಾದ್‌ ಅವರನ್ನು ಬೆಂಬಲಿಸಿ ಕಾಂಗ್ರೆಸ್ ತೊರೆದಿದ್ದಾರೆ.

SCROLL FOR NEXT