ದೇಶ

ಸೋನಾಲಿ ಫೋಗಟ್ ಹತ್ಯೆ ಪ್ರಕರಣದ ತನಿಖೆಯ 'ಗೌಪ್ಯ ವರದಿಯನ್ನು' ಹರಿಯಾಣ ಸರ್ಕಾರಕ್ಕೆ ನೀಡಿದ್ದೇವೆ: ಪ್ರಮೋದ್ ಸಾವಂತ್

Ramyashree GN

ಪಣಜಿ: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕುರಿತು ತಮ್ಮ ಸರ್ಕಾರವು 'ಗೌಪ್ಯ ವರದಿ'ಯನ್ನು ಹರಿಯಾಣ ಮುಖ್ಯಮಂತ್ರಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಂಗಳವಾರ ಹೇಳಿದ್ದಾರೆ.

ತನಿಖೆಯ ಭಾಗವಾಗಿ ಕೆಲವು ಹೇಳಿಕೆಗಳನ್ನು ದಾಖಲಿಸಲು ಗೋವಾ ಪೊಲೀಸರ ತಂಡವು ಮಂಗಳವಾರ ಹರಿಯಾಣಕ್ಕೆ ತೆರಳಲಿದೆ ಎಂದು ಸಾವಂತ್ ಸುದ್ದಿಗಾರರಿಗೆ ತಿಳಿಸಿದರು.

ಹರಿಯಾಣದ ಹಿಸಾರ್‌ನ ಮಾಜಿ ಟಿಕ್ ಟಾಕ್ ತಾರೆ ಮತ್ತು ರಿಯಾಲಿಟಿ ಟಿವಿ ಶೋ 'ಬಿಗ್ ಬಾಸ್' ಸ್ಪರ್ಧಿಯಾಗಿದ್ದ ಸೋನಾಲಿ ಫೋಗಟ್ (43) ಆಗಸ್ಟ್ 23 ರಂದು ಕರಾವಳಿ ರಾಜ್ಯಕ್ಕೆ ಇಬ್ಬರು ಸಹಚರರೊಂದಿಗೆ ಆಗಮಿಸಿದ್ದರು. ಅದಾದ ಒಂದು ದಿನದ ಬಳಿಕ ಸೋನಾಲಿಯನ್ನು ಉತ್ತರ ಗೋವಾದ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಸೋನಾಲಿ ಅವರು ಸಾವಿಗೀಡಾಗಿದ್ದರು. ಮೊದಲಿಗೆ ಹೃದಯಾಘಾತ ಎಂದು ಹೇಳಲಾಗಿದ್ದರೂ, ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡ ಬಳಿಕ ಹಲವಾರು ಆಘಾತಕಾರಿ ವಿಚಾರಗಳು ಬೆಳಕಿಗೆ ಬಂದಿದ್ದವು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಇದುವರೆಗೆ ಫೋಗಟ್‌ನ ಇಬ್ಬರು ಸಹಚರರು ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಈಗ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೇಣಿಯ ಅಧಿಕಾರಿ ನಡೆಸಲಿದ್ದಾರೆ ಎಂದು ಸಾವಂತ್ ಹೇಳಿದ್ದಾರೆ.

ಪ್ರಕರಣದ ತನಿಖೆಯನ್ನು ಈ ಹಿಂದೆ ಪೊಲೀಸ್ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿ ನಡೆಸಿದ್ದರು.

SCROLL FOR NEXT