ದೇಶ

ಗುಜರಾತ್ ಚುನಾವಣೆ: 2ನೇ ಹಂತದ ಬಹಿರಂಗ ಪ್ರಚಾರಕ್ಕೆ ತೆರೆ, ಡಿಸೆಂಬರ್ 5ಕ್ಕೆ ಮತದಾನ

Lingaraj Badiger

ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಹೈವೋಲ್ಟೇಜ್ ಬಹಿರಂಗ ಪ್ರಚಾರಕ್ಕೆ ಶನಿವಾರ ಸಂಜೆ 5 ಗಂಟೆಗೆ ತೆರೆ ಬಿದ್ದಿದೆ.

ಡಿಸೆಂಬರ್ 5 ರಂದು ಕೊನೆಯ ಹಂತದ ಮತದಾನ ನಡೆಯಲಿದ್ದು, 93 ಕ್ಷೇತ್ರಗಳಲ್ಲಿ ಒಟ್ಟು 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.

ಎರಡನೇ ಹಂತದ ಪ್ರಮುಖ ಅಭ್ಯರ್ಥಿಗಳೆಂದರೆ ಘಟ್ಲೋಡಿಯಾದಿಂದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ವಿರಂಗಾಮ್‌ನಿಂದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಮತ್ತು ಗಾಂಧಿನಗರ ದಕ್ಷಿಣದಿಂದ ಒಬಿಸಿ ನಾಯಕ ಅಲ್ಪೇಶ್ ಠಾಕೋರ್ ಅವರು ಕಣದಲ್ಲಿದ್ದಾರೆ.

ಹಾರ್ದಿಕ್ ಪಟೇಲ್ ಮತ್ತು ಠಾಕೂರ್ ಇಬ್ಬರೂ ಭಾರತೀಯ ಜನತಾ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಸೌರಾಷ್ಟ್ರ, ಕಚ್ ಮತ್ತು ದಕ್ಷಿಣ ಗುಜರಾತ್‌ನ 89 ಸ್ಥಾನಗಳಿಗೆ ಮೊದಲ ಹಂತದ ಮತದಾನ ಡಿಸೆಂಬರ್ 1 ರಂದು ನಡೆದಿದ್ದು, ಶೇ. 63.31 ರಷ್ಟು ಮತದಾನವಾಗಿದೆ, ಇದು ಕಳೆದ ಬಾರಿಗಿಂತ ಕಡಿಮೆಯಾಗಿದೆ.

ಅಹಮದಾಬಾದ್, ವಡೋದರಾ ಮತ್ತು ಗಾಂಧಿನಗರ ಸೇರಿದಂತೆ ಉತ್ತರ ಮತ್ತು ಮಧ್ಯ ಗುಜರಾತ್‌ನ 14 ಜಿಲ್ಲೆಗಳಲ್ಲಿ ಸೋಮವಾರ ಮತದಾನ ನಡೆಯಲಿದ್ದು, ಆಡಳಿತರೂಢ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

SCROLL FOR NEXT