ದೇಶ

ಭಾರತ್ ಜೋಡೋ ಯಾತ್ರೆ ಹಿನ್ನಲೆ: ಚಳಿಗಾಲದ ಅಧಿವೇಶನಕ್ಕೆ ರಾಹುಲ್ ಗಾಂಧಿ ಗೈರು

Srinivasamurthy VN

ನವದೆಹಲಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಚಳಿಗಾಲದ ಅಧಿವೇಶನಕ್ಕೆ ಗೈರಾಗಲಿದ್ದು ಅವರು ತಮ್ಮ ಭಾರತ್ ಜೋಡೋ ಯಾತ್ರೆಯಲ್ಲಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಭಾರತ್ ಜೋಡೋ ಯಾತ್ರೆ ನಡೆಯುತ್ತಿರುವುದರಿಂದ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಪ್ರಾಯೋಗಿಕವಲ್ಲ ಎಂದು ಕಾಂಗ್ರೆಸ್ ಸಂಸದ ಕೆಸಿ ವೇಣುಗೋಪಾಲ್ ಭಾನುವಾರ ಹೇಳಿದ್ದಾರೆ. ಆ ಮೂಲಕ ರಾಹುಲ್ ಗಾಂಧಿ ಕಲಾಪಕ್ಕೆ ಗೈರಾಗಲಿದ್ದಾರೆ ಎಂದು ಅವರ ಸ್ಪಷ್ಟಪಡಿಸಿದ್ದಾರೆ.

ಇಂದು ನಡೆದ ಕಾಂಗ್ರೆಸ್‌ ಸಂಚಾಲನಾ ಸಮಿತಿ ಸಭೆಯಲ್ಲಿ ನಾವು ಎರಡು ವಿಷಯಗಳನ್ನು ಚರ್ಚಿಸಿದ್ದೇವೆ. ಮೊದಲನೆಯದು ನಮ್ಮ ಪಕ್ಷದ ಸರ್ವಸದಸ್ಯರ ಅಧಿವೇಶನವನ್ನು ಫೆಬ್ರವರಿಯ ಉತ್ತರಾರ್ಧದಲ್ಲಿ ರಾಯಪುರ, ಛತ್ತೀಸ್‌ಗಢದಲ್ಲಿ ನಡೆಸಲು ನಿರ್ಧರಿಸಿದ್ದೇವೆ. ಇದು 3 ದಿನಗಳ ಅಧಿವೇಶನವಾಗಿದೆ. 2ನೆಯದಾಗಿ, ನಾವು ಭಾರತ್ ಜೋಡೋ ಯಾತ್ರೆಯ ಮುಂದಿನ ಕ್ರಮಗಳನ್ನು ಪರಿಶೀಲಿಸಿದ್ದೇವೆ ಮತ್ತು ಚರ್ಚಿಸಿದ್ದೇವೆ. ನಾವು ಜನವರಿ 26 ರಿಂದ 'ಹಾತ್ ಸೇ ಹಾತ್ ಜೋಡೋ ಅಭಿಯಾನ' ಬೃಹತ್ ಅಭಿಯಾನವನ್ನು ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಇದು ಎರಡು ತಿಂಗಳ ಅವಧಿಯ ಅಭಿಯಾನವಾಗಿರುತ್ತದೆ ಎಂದು ವೇಣುಗೋಪಾಲ್ ಹೇಳಿದರು.

ಈ ಅಭಿಯಾನದ ಪ್ರಕಾರ, ಎಲ್ಲಾ ಗ್ರಾಮ ಪಂಚಾಯಿತಿಗಳು ಮತ್ತು ಬೂತ್‌ಗಳನ್ನು ಒಳಗೊಳ್ಳಲು ಬ್ಲಾಕ್ ಮಟ್ಟದ ಯಾತ್ರೆಗಳು ಮತ್ತು ಪಕ್ಷವು ಈ ಯಾತ್ರೆಯ ಮುಖ್ಯ ಸಂದೇಶದ ಬಗ್ಗೆ ರಾಹುಲ್ ಗಾಂಧಿಯವರಿಂದ ಪತ್ರವನ್ನು ಹಸ್ತಾಂತರಿಸಲಿದೆ. ಈ ಬ್ಲಾಕ್ ಮಟ್ಟದ ಯಾತ್ರೆಯಲ್ಲಿ ಗ್ರಾಮ ಸಭೆಗಳು ಮತ್ತು ಧ್ವಜಾರೋಹಣ ನಡೆಯಲಿದೆ  ಎಂದು ಅವರು ಹೇಳಿದರು.

ಚಳಿಗಾಲದ ಅಧಿವೇಶನವು ಡಿಸೆಂಬರ್ 7 ರಂದು ಪ್ರಾರಂಭವಾಗಲಿದ್ದು, ಡಿಸೆಂಬರ್ 29 ರವರೆಗೆ ನಡೆಯಲಿದೆ. ಗುಜರಾತ್ ಚುನಾವಣಾ ವೇಳಾಪಟ್ಟಿಯಿಂದಾಗಿ ಅಧಿವೇಶನವನ್ನು ಒಂದು ತಿಂಗಳು ವಿಳಂಬಗೊಳಿಸಲಾಗಿತ್ತು. 
 

SCROLL FOR NEXT