ದೇಶ

ಪ್ರಧಾನಿ ಮೋದಿ ವಿರುದ್ಧ ಸುಳ್ಳು ಮಾಹಿತಿ ಹಂಚಿಕೆ: ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯನ್ನು ಬಂಧಿಸಿದ ಗುಜರಾತ್ ಪೊಲೀಸರು

Ramyashree GN

ಅಹಮದಾಬಾದ್: ಅಹಮದಾಬಾದ್ ಸೈಬರ್ ಕ್ರೈಂ ಪೊಲೀಸರು ಮಂಗಳವಾರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರನ್ನು ಜೈಪುರ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಈ ವಿಚಾರವನ್ನು ತೃಣಮೂಲ ನಾಯಕ ಡೆರೆಕ್ ಒ ಬ್ರಿಯಾನ್ ತಮ್ಮ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಸೈಬರ್ ಕ್ರೈಂ ವಿಭಾಗದ ಮೂಲಗಳು ಹೇಳುವಂತೆ, ಅದರ ತಂಡವು ನಕಲಿ ಸುದ್ದಿಗಳು ಮತ್ತು ದಾಖಲೆಗಳ ಹಂಚಿಕೆ ಬಗ್ಗೆ ಸಾಮಾಜಿಕ ಮಾಧ್ಯಮದ ಮೇಲೆ ಕಣ್ಣಿಟ್ಟಿದೆ. ಹೀಗಾಗಿ, ತಂಡವು ಸಾಕೇತ್ ಗೋಖಲೆ ಅವರು ಆರ್‌ಟಿಐನ ಸುಳ್ಳು ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಿದೆ.

ಗೋಖಲೆ ಅವರು ಪತ್ರಿಕೆಯ ಕಟಿಂಗ್‌ಗಳನ್ನು ಹಂಚಿಕೊಂಡಿದ್ದಾರೆ. ಗುಜರಾತಿನ ತೂಗು ಸೇತುವೆ ಕುಸಿದು 135 ಮಂದಿ ಸಾವಿಗೀಡಾದ ಬಳಿಕ ಮೊರ್ಬಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ 30 ಕೋಟಿ ಖರ್ಚು ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದರು.

ಸೈಬರ್ ಕ್ರೈಂ ಪೊಲೀಸರು ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ನಂತರ, ಗೋಖಲೆ ಅವರು ಹಂಚಿಕೊಂಡಿದ್ದ ಮಾಹಿತಿಯನ್ನು ಆರ್‌ಟಿಐ ಅಡಿಯಲ್ಲಿ ನೀಡಲಾಗಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ, ಸೈಬರ್ ಕ್ರೈಂ ಸಾಕೇತ್ ಗೋಖಲೆ ವಿರುದ್ಧ ಪ್ರಕರಣ ದಾಖಲಿಸಿದೆ.

ಸುಳ್ಳು ಮಾಹಿತಿಯನ್ನು ಗೋಖಲೆ ಅವರು ಪೋಸ್ಟ್ ಮಾಡಿದ ನಂತರ, ಇತರರು ಅದನ್ನು ರೀಟ್ವೀಟ್ ಮಾಡಿದ್ದಾರೆ ಮತ್ತು ಕೆಲವು ಪರಿಶೀಲಿಸದ 'ದಾಖಲೆಗಳನ್ನು' ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ.

ಪೊಲೀಸರು ಗೋಖಲೆಯವರನ್ನು ಟ್ರಾನ್ಸಿಟ್ ಅರೆಸ್ಟ್‌ನಲ್ಲಿ ಗುಜರಾತ್‌ಗೆ ಕರೆತಂದಿದ್ದಾರೆ ಮತ್ತು ಮರುದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT