ದೇಶ

ನಾಳೆ ಹಿಮಾಚಲ ಪ್ರದೇಶ ನೂತನ ಸಿಎಂ, ಡಿಸಿಎಂ ಪ್ರಮಾಣ ವಚನ ಸ್ವೀಕಾರ: ಖರ್ಗೆ

Lingaraj Badiger

ಕಲಬುರಗಿ: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿಸೆಂಬರ್ 11ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ತಿಳಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ತಮ್ಮ ತವರು ಜಿಲ್ಲೆ ಕಲಬುರಗಿಗೆ ಆಗಮಿಸಿದ ಖರ್ಗೆ ಅವರನ್ನು ಪ್ರತಿಪಕ್ಷ ನಾಯಕ ಸಿದ್ದಾರಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರು ಅದ್ಧೂರಿ ಸ್ವಾಗತ ನೀಡಿದರು.

ಈ ವೇಳೆ ಮಾತನಾಡಿದ ಖರ್ಗೆ, ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕರ್ನಾಟಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು. ಏಪ್ರಿಲ್-ಮೇ 2023 ರೊಳಗೆ ಚುನಾವಣೆ ನಡೆಯಲಿದೆ ಎಂದಿದ್ದಾರೆ.

"ಹಿಮಾಚಲ ಪ್ರದೇಶದಲ್ಲಿ 10 ಅಂಶಗಳ ಕಾರ್ಯಕ್ರಮ ನೀಡಿ ಗೆದ್ದಿದ್ದೇವೆ. ಅಲ್ಲಿ ಉತ್ತಮ ಬಹುಮತದಿಂದ ಗೆದ್ದಿದ್ದೇವೆ. ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ" ಎಂದು ಖರ್ಗೆ ಹೇಳಿದರು.

ಕಲಬುರಗಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರೊಂದಿಗೆ ಚರ್ಚಿಸಿದ ನಂತರ ನಾಳೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮಾಡಲು ನಿರ್ಧರಿಸಿದ್ದೇವೆ ಎಂದರು.

SCROLL FOR NEXT