ದೇಶ

ಬೆಂಗಳೂರು: ಮಧ್ಯಮ ವರ್ಗದ ಸಂಬಳದಾರರ ಮನೆ ಬಾಡಿಗೆ ಭತ್ಯೆ 50% ಹೆಚ್ಚಳಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿ

Srinivas Rao BV

ನವದೆಹಲಿ: ಬೆಂಗಳೂರು ಮತ್ತು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇತರ ಸಮನಾದ ನಗರಗಳನ್ನು ದೇಶದ ಮಹಾನಗರಗಳ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ, ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ  ನಿರ್ಮಲಾ ಸೀತಾರಾಮನ್ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ. 

ಇಂದು (ಡಿ.13) ರಂದು ಸಂಸತ್ ಕಲಾಪದ ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿರುವ ಸಂಸದ ತೇಜಸ್ವೀ ಸೂರ್ಯ, ಆದಾಯ ತೆರಿಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಸ್ತುತ ಶೇ, 40 ರಷ್ಟು ಇರುವ ಮನೆ ಬಾಡಿಗೆ ಭತ್ಯೆಯನ್ನು ಶೇ.50 ಕ್ಕೆ ಏರಿಸುವಂತೆ ಒತ್ತಾಯಿಸಿದ್ದಾರೆ.

"ಬೆಂಗಳೂರು ಮಹಾನಗರ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಪ್ರಮುಖ ನಗರವಾಗಿದ್ದು, ಸಂಬಳದಾರ ವರ್ಗವು ಅತಿ ಹೆಚ್ಚು ವಾಸಿಸುವ ದೇಶದ ಮುಖ್ಯ ನಗರವಾಗಿದೆ. ದೆಹಲಿ, ಚೆನ್ನೈ, ಮುಂಬೈ ಮತ್ತು ಕೊಲ್ಕತ್ತಾ ಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ, ನಗರದ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ  ಸಾಕಷ್ಟು ಅನುಕೂಲವಾಗಲಿದೆ. ಆದಾಯ ತೆರಿಗೆ ನಿಯಮಾವಳಿಗಳನ್ನು ಪರಾಮರ್ಶಿಸುವ ಮೂಲಕ ಬೆಂಗಳೂರು ನಗರದ ಜನತೆಯ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಮನವಿ ಮಾಡುತ್ತೇನೆ" ಎಂದು ವಿವರಿಸಿದರು.

1.18 ಕೋಟಿ ಮಂದಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ಕರ್ನಾಟಕದ ಜಿಡಿಪಿ ಗೆ 80% ರಷ್ಟು ಕೊಡುಗೆ ನೀಡುತ್ತಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದಲೂ ಕರೆಯಲ್ಪಡುವ ಬೆಂಗಳೂರು ಅನೇಕ ಸ್ಟಾರ್ಟ್ - ಅಪ್ ಗಳ ತವರಾಗಿದ್ದು. 
ಬೆಂಗಳೂರು ಮತ್ತು ಇತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮನೆ ಬಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಬೆಂಗಳೂರು ಮತ್ತು ಇಂತಹ ನಗರಗಳನ್ನು ಮಹಾ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

SCROLL FOR NEXT