ದೇಶ

ದಾರಿತಪ್ಪಿಸುವ ಪತಂಜಲಿ ಜಾಹೀರಾತು ಪ್ರಕಟಿಸಿದ 2 ಮಾಧ್ಯಮ ಸಂಸ್ಥೆಗಳಿಗೆ ಪ್ರೆಸ್ ಕೌನ್ಸಿಲ್ ನಿಂದ ನೋಟಿಸ್

Lingaraj Badiger

ನವದೆಹಲಿ: ಬಾಬಾ ರಾಮ್‌ದೇವ್‌ ಅವರ ಪತಂಜಲಿ ಗ್ರೂಪ್‌ ಬಿಡುಗಡೆ ಮಾಡಿರುವ ಮಧುಮೇಹ, ರಕ್ತದೊತ್ತಡ ಮತ್ತು ಇತರ ಕಾಯಿಲೆಗಳಿಗೆ ಔಷಧೋಪಚಾರದ ಕುರಿತು ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು ಪ್ರಕಟಿಸಿದ ಎರಡು ಪ್ರಮುಖ ಮಾಧ್ಯಮ ಸಂಸ್ಥೆಗಳಿಗೆ ಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾ(ಪಿಸಿಐ) ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್(ಆಕ್ಷೇಪಾರ್ಹ ಜಾಹೀರಾತುಗಳು)ಕಾಯ್ದೆಯನ್ನು ಉಲ್ಲಂಘಿಸುವ ಜಾಹೀರಾತುಗಳನ್ನು ಪ್ರಕಟಿಸಿದ ಮಾಧ್ಯಮ ಸಂಸ್ಥೆಗಳ ವಿರುದ್ಧ ಕೇರಳ ಮೂಲದ ಆರ್‌ಟಿಐ ಕಾರ್ಯಕರ್ತ, ನೇತ್ರ ತಜ್ಞ ಡಾ ಕೆ ವಿ ಬಾಬು ಅವರು ಸಲ್ಲಿಸಿದ ದೂರಿನ ಮೇರೆಗೆ ಒಂದು ರಾಷ್ಟ್ರೀಯ ಮತ್ತೊಂದು ಪ್ರಾದೇಶಿಕ ಮಾಧ್ಯಮಕ್ಕೆ ಶೋಕಾಸ್ ನೋಟಿಸ್‌ ನೀಡಲಾಗಿದೆ.

ಪತಂಜಲಿ ಸಮೂಹದ ಮಾರ್ಕೆಟಿಂಗ್ ವಿಭಾಗದ ದಿವ್ಯಾ ಫಾರ್ಮಸಿ ಈ ಜಾಹೀರಾತುಗಳನ್ನು ನೀಡಿದೆ. ಪಿಸಿಐ ಈ ನೋಟಿಸ್ ನೀಡಲು ಮುಂದಾಗುವ ಮೊದಲು, ಉತ್ತರಾಖಂಡ್ ರಾಜ್ಯ ಡ್ರಗ್ ಕಂಟ್ರೋಲರ್ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳು ಈ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿದ್ದರು.

ಈ ಜಾಹೀರಾತುಗಳು 2020ರ ಪತ್ರಿಕೋದ್ಯಮದ ನಡವಳಿಕೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತವೆ. ಇದು ರೋಗಿಗಳ ಹಿತಾಸಕ್ತಿಗೆ ವಿರುದ್ಧವಾಗಿದೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರ. ಈ ಸಂಬಂಧ ಪಿಸಿಐ ಎರಡು ಭಾರತೀಯ ದಿನಪತ್ರಿಕೆಗಳ ಸಂಪಾದಕರಿಗೆ ನೋಟಿಸ್ ನೀಡಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಡಾ. ಬಾಬು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT