ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಆರ್ ಎಸ್ಎಸ್ ಬಗ್ಗೆ ಮಾತನಾಡಿದ್ದು, ಆರ್ ಎಸ್ಎಸ್ ಸಂಘಟನೆ ಮಹಿಳೆಯರನ್ನು ಹತ್ತಿಕ್ಕುವ ಸಂಘಟನೆಯಾಗಿದೆ, ಆದ್ದರಿಂದಲೇ ಅಲ್ಲಿ ಮಹಿಳಾ ಸದಸ್ಯರಿಲ್ಲ ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ, ಆರ್ ಎಸ್ ಎಸ್ ಹಾಗೂ ಬಿಜೆಪಿಯ ಯೋಜನೆ ಭಯವನ್ನು ಹರಡುವುದಾಗಿದೆ ಹಾಗೂ ತಮ್ಮ ಭಾರತ್ ಜೋಡೋ ಯಾತ್ರೆ ದ್ವೇಷ ಹಾಗೂ ಭಯದ ವಿರುದ್ಧ ನಿಲ್ಲುವುದಾಗಿದೆ ಎಂದು ಹೇಳಿದ್ದಾರೆ.
ಸೆ.07 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭಗೊಂಡ ಭಾರತ್ ಜೋಡೋ ಯಾತ್ರೆ ಶುಕ್ರವಾರದಂದು 100 ದಿನಗಳನ್ನು ಪೂರೈಸಲಿದೆ.
ಬುಧವಾರದಂದು ಯಾತ್ರೆ ಸವಾಯಿ ಮಾಧೋಪುರ್ ನ್ನು ತಲುಪಿದೆ.
ತಮ್ಮ ಯಾತ್ರೆಯಲ್ಲಿ ಭಗವಾನ್ ರಾಮನ ವಿಷಯವನ್ನೂ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದು, ಬಿಜೆಪಿ ಹಾಗೂ ಆರ್ ಎಸ್ಎಸ್ ಜೈ ಸಿಯಾರಾಮ್ ಬದಲು ಜೈ ಶ್ರೀರಾಮ್ ಘೋಷಣೆ ಕೂಗುವ ಮೂಲಕ ಸೀತಾಮಾತೆಗೂ ಅವಮಾನ ಮಾಡುತ್ತಿದ್ದಾರೆ. ಆರ್ ಎಸ್ಎಸ್ ನಲ್ಲಿ ಮಹಿಳೆಯರು ಕಾಣಸಿಗುವುದಿಲ್ಲ. ಅವರು ಮಹಿಳೆಯರಿಗೆ ತಮ್ಮ ಸಂಘಟನೆ ಸೇರಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆದರೆ ಆರ್ ಎಸ್ಎಸ್ ನಲ್ಲಿ ರಾಷ್ಟ್ರ ಸೇವಿಕಾ ಸಮಿತಿ ಎಂಬ ಮಹಿಳಾ ವಿಭಾಗವಿದೆ.
ನೀವು ಜೈ ಶ್ರೀರಾಮ್ ಶ್ರೀರಾಮ್ ಎಂಬ ಘೋಷಣೆ ಕೂಗುತ್ತೀರ, ಅದ್ಯಾಕೆ ಜೈ ಸಿಯಾರಾಮ್ ಎಂಬ ಘೋಷಣೆ ಕೂಗುವುದಿಲ್ಲ? ಸೀತಾ ಮಾತೆಯನ್ನು ಯಾಕೆ ಬಿಟ್ಟುಬಿಡುತ್ತೀರಾ? ಸೀತಾ ಮಾತೆಗೆ ಏಕೆ ಅವಮಾನ ಮಾಡುತ್ತೀರಾ? ಭಾರತದ ಮಹಿಳೆಯರಿಗೇಕೆ ಅವಮಾನ ಮಾಡುತ್ತೀರ? ಎಂಬ ಪ್ರಶ್ನೆಗಳನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ಮಂದಿಗೆ ಕೇಳಬಯಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಭಯದಿಂದ ಬಿಜೆಪಿ ಹಾಗೂ ಆರ್ ಎಸ್ಎಸ್ ಗೆ ಲಾಭವಾಗುತ್ತಿದೆ. ಅವರ ಇಡೀ ಸಂಘಟನೆ ಇಂಥಹದ್ದೇ ಕೆಲಸಗಳಲ್ಲಿ ತೊಡಗಿದ್ದು ದೇಶ ಇಬ್ಭಾಗ ಮಾಡುವುದೇ ಅವರ ಗುರಿಯಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.