ದೇಶ

ಆಸ್ಪತ್ರೆಗಳಲ್ಲಿ ಆಮ್ಲಜನಕ, ಜೀವರಕ್ಷಕ ಸಾಧನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Ramyashree GN

ನವದೆಹಲಿ: ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ, ಮುಂದೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ಆಸ್ಪತ್ರೆಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್, ಸಿಲಿಂಡರ್‌ಗಳ ಸಾಕಷ್ಟು ದಾಸ್ತಾನು ಮತ್ತು ವೆಂಟಿಲೇಟರ್‌ಗಳಂತಹ ಕ್ರಿಯಾತ್ಮಕ ಜೀವರಕ್ಷಕ ಸಾಧನಗಳು ಲಭ್ಯವಿರುವಂತೆ ನೋಡಿಕೊಳ್ಳಿ ಎಂದು ಕೇಂದ್ರ ಸರ್ಕಾರ ಶನಿವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಿಗಳಿಗೆ ಸೂಚಿಸಿದೆ.

ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (ಪಿಎಸ್‌ಎ) ಆಮ್ಲಜನಕವನ್ನು ಉತ್ಪಾದಿಸುವ ಘಟಕಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳುವಂತೆ ಮತ್ತು ಅವುಗಳನ್ನು ಪರಿಶೀಲಿಸಲು ನಿಯಮಿತ ಅಣಕು ಪ್ರದರ್ಶನ ನಡೆಸುವಂತೆ ಆರೋಗ್ಯ ಸಚಿವಾಲಯವು ಹೇಳಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ, ದೇಶದಲ್ಲಿ ಈಗ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ, ಮುಂದೆ ಎದುರಾಗುವ ಯಾವುದೇ ಸಂದರ್ಭಗಳನ್ನು ಎದುರಿಸಲು ವೈದ್ಯಕೀಯ ಮೂಲಸೌಕರ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.

ಎಲ್ಲಾ ಕ್ಲಿನಿಕಲ್ ಸೆಟ್ಟಿಂಗ್‌ಗಳಲ್ಲಿ ವೈದ್ಯಕೀಯ ಆಮ್ಲಜನಕವು ಪ್ರಮುಖ ಮತ್ತು ಅಗತ್ಯವಾದ ಸಂಪನ್ಮೂಲವಾಗಿದೆ. ವಿಶೇಷವಾಗಿ ಸಾಂಕ್ರಾಮಿಕ ನಿರ್ವಹಣೆಯ ಸಮಯದಲ್ಲಿ ಮತ್ತು ರೋಗಿಗಳ ಆರೈಕೆ ಮತ್ತು ಕೋವಿಡ್-19 ನಿರ್ವಹಣೆಯ ಸಮಯದಲ್ಲಿ ಜೀವಗಳನ್ನು ಉಳಿಸಲು ವಿಶ್ವಾಸಾರ್ಹ ಆಮ್ಲಜನಕ ಪೂರೈಕೆ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

SCROLL FOR NEXT